ಅತಿವೃಷ್ಟಿ ಪ್ರದೇಶವಾಗಿ ಮೂಡಿಗೆರೆ ಸೇರ್ಪಡೆ; ಶಾಸಕ ಕುಮಾರಸ್ವಾಮಿ ಹೋರಾಟಕ್ಕೆ ಜಯ

ಚಿಕ್ಕಮಗಳೂರು: ಅತೀವೃಷ್ಟಿ ಪೀಡಿತ ತಾಲೂಕುಗಳ ಪಟ್ಟಿಗೆ ಜಿಲ್ಲೆಯ ಮೂಡಿಗೆರೆ ತಾಲೂಕನ್ನು ಸೇರಿಸಲಾಗಿದ್ದು, ಶಾಸಕ ಎಂಪಿ ಕುಮಾರಸ್ವಾಮಿ ಅವರ ಹೋರಾಟಕ್ಕೆ ಜಯ ದೊರಕಿದಂತಾಗಿದೆ.
ಮೊನ್ನೆಯಷ್ಟೇ ಎ.ಪಿ ಕುಮಾರಸ್ವಾಮಿ ವಿಧಾಸೌಧದ ಗಾಂಧಿಪ್ರತಿಮೆ ಬಳಿ ಏಕಾಂಗಿಯಾಗಿ ಕುಳಿತು ಧರಣಿ ನಡೆಸಿ, ತಮ್ಮ ಕ್ಷೇತ್ರವನ್ನು ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದ್ದರು.
ಸ್ಥಳಕ್ಕಾಗಮಿಸಿದ ಸಚಿವ ಆರ್ ಅಶೋಕ್ ಮುಂದೆ ಎಂ.ಪಿ ಕುಮಾರಸ್ವಾಮಿ ಕಣ್ಣೀರು ಹಾಕಿ ತಮ್ಮ ಕ್ಷೇತ್ರದ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಆಗ ಆರ್ ಅಶೋಕ್ ಮೂಡಿಗೆರೆಯನ್ನು ಪಟ್ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಹೊಸದಾಗಿ ಸೇರ್ಪಡೆ ಮಾಡಿ ಬಿಡುಗಡೆಗೊಳಿಸಿರುವ ತಾಲೂಕುಗಳ ಪಟ್ಟಿಯಲ್ಲಿ ಮೂಡಿಗೆರೆಯನ್ನು ಸೇರಿಸಲಾಗಿದೆ.
ಅತೀವೃಷ್ಟಿ ಪೀಡಿತ ಪ್ರದೇಶ ರಾಜ್ಯದ ಒಟ್ಟು 83 ತಾಲೂಕುಗಳು:
ರಾಜ್ಯದಲ್ಲಿ ಈ ಹಿಂದೆ 13 ಜಿಲ್ಲೆಗಳ 61 ತಾಲೂಕುಗಳನು ಅತೀವೃಷ್ಟಿಪೀಡಿತ ಪ್ರದೇಶವೆಂದು ಘೋಷಿಸಲಾಗಿತ್ತು. ಈಗ ಇದಕ್ಕೆ ಹೆಚ್ಚುವರಿಯಾಗಿ 22 ತಾಲೂಕುಗಳನ್ನು ಗುರುತಿಸಿ ಸೇರ್ಪಡೆಗೊಳಿಸಲಾಗಿದ್ದು ಒಟ್ಟು 83 ತಾಲೂಕುಗಳು ಅತೀವೃಷ್ಟಿ ಪ್ರದೇಶದ ಪಟ್ಟಿಗೆ ಸೇರಿವೆ.
ಬೆಂಗಳೂರು ನಗರದೊಳಗೆ ರಸ್ತೆಗಳಲ್ಲಿ ನೀರು ನಿಲುಗಡೆಗೊಳ್ಳುವ 50ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿ ತುರ್ತು ಅಭಿವೃದ್ಧಿ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.




