ಚಿಕ್ಕಮಗಳೂರು

‘ಚಿಕ್ಕಮಗಳೂರು ಜಿಲ್ಲೆಯತ್ತ ಕಣ್ಣೆತ್ತಿಯೂ ನೋಡದ ಶೋಭಾ ಕರಂದ್ಲಾಜೆ’

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಚಂಡಮಾರುತದ ಹಾನಿ ಮತ್ತು ಕೊರೋನ  ಸಂಕಷ್ಟವಿರುವಾಗ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡದೆ, ಪರಿಹಾರೋಪಾಯಕ್ಕೆ ಮುಂದಾಗದೆ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಎಂದು ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಜಿಲ್ಲಾಧ್ಯಕ್ಷ ಕಾರ್ತಿಕ್ ಚೆಟ್ಟಿಯಾರ್ ಆರೋಪಿಸಿದ್ದಾರೆ.

ಈ ಕುರಿತು ಅವರು ಹೇಳಿಕೆ ನೀಡಿದ್ದು, ಸಂಸದರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲೋ ಅಪರೂಪಕ್ಕೊಮ್ಮೆ ಮಿನುಗುತಾರೆಯಂತೆ ಪ್ರತ್ಯಕ್ಷರಾಗುತ್ತಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಬಳಿಕ ಕ್ಷೇತ್ರದ ಜನರನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಯಾವುದೇ ರೀತಿಯಲ್ಲಿಯೂ ಪ್ರಯತ್ನಿಸಿಲ್ಲ. ಲೋಕಸಭೆಯಲ್ಲಿ ಕಾಫಿನಾಡಿನ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತದೆ ಈ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದಾರೆ.

ಕಳೆದ ಒಂದೂವರೆ, ಎರಡು ವರ್ಷಗಳಿಂದ ಜಿಲ್ಲೆಯ ಜನರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನ ಹರಡುತ್ತಿರುವ ಸಮಯದಲ್ಲಿ ಜನರು ಕೂಲಿ ಕೆಲಸ, ವ್ಯಾಪಾರ, ವ್ಯವಹಾರ, ಉದ್ಯೋಗ ಇಲ್ಲದೆ ಸಂಕಟ ಅನುಭವಿಸುತ್ತಿರುವಾಗ ಸಂಸದರು ಕ್ಯಾರೇ ಎಂದಿಲ್ಲ.
ಗ್ರಾಮೀಣ ಭಾಗದ ಜನರು ಕೈಯಲ್ಲಿ ಕಾಸಿಲ್ಲದೆ ಮನೆಯಲ್ಲಿ ಲಾಕ್ ಡೌನ್ ವೇಳೆ ಕೂತು ಪರಿತಪಿಸುತ್ತಿದ್ದರೆ ಸಂಸದರು ಕನಿಷ್ಠ ಜನರನ್ನು ಗಮನಿಸಿ ಅವರಿಗೆ ಸರ್ಕಾರದ ಸೌಕರ್ಯ ಅವಶ್ಯಕವಾಗಿ ತಲುಪಿಸಲು ಪ್ರಯತ್ನಿಸಲಿಲ್ಲ. ತೌಕ್ತೆ ಚಂಡ ಮಾರುತದ ಪರಿಣಾಮ ನೂರಾರು ಕೋಟಿ ರೂಪಾಯಿಗಳ ನಷ್ಟ ಸಂಭವಿಸಿದರೂ, ಜನರು ಮನೆ ಮಠ, ಆಸ್ತಿ ಪಾಸ್ತಿ ಕಳೆದುಕೊಂಡರು ಕೂಡ ಸಂಸದರು ಸ್ಥಳಕ್ಕೆ ಭೇಟಿ ನೀಡದೆ ಇರುವುದು ಜನಪ್ರತಿನಿಧಿ ಆಗಿರುವ ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.

ಚಂಡಮಾರುತ ಅಪ್ಪಳಿಸಿದ ಬಳಿಕ ಆದ ಹಾನಿ ಬಗ್ಗೆ ಕೇಂದ್ರದ ತಂಡ ಭೇಟಿ ನೀಡಿ ವರದಿ ನೀಡಲು ಬಂದಿದ್ದರೂ ಅವರನ್ನು ಭೇಟಿಯಾಗಿ, ಅವರಿಗೆ ಕ್ಷೇತ್ರದಲ್ಲಿ ನಡೆದ ನಷ್ಟದ ಪ್ರಮಾಣವನ್ನು ಮನವರಿಕೆ ಮಾಡಿಕೊಡಲು ಸಂಸದರು ಕನಿಷ್ಠ ಪ್ರಯತ್ನಿಸಿಲ್ಲ ಎಂದು ದೂರಿದ್ದಾರೆ.

ಕ್ಷೇತ್ರದ ಜನರು ಒಂದಿಲ್ಲೊಂದು ರೀತಿಯ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಕೂಡ ಅದನ್ನು ಪರಿಹರಿಸಲು ಸಂಸದರು ಕಾಳಜಿ ವಹಿಸದೇ ಇರುವುದು ಜನಪ್ರತಿನಿಧಿ ಆಗಿದ್ದೂ ಪ್ರಯೋಜನ ಇಲ್ಲದಂತಾಗಿದ್ದಾರೆ. ಸಾಮಾನ್ಯ ಜನರ, ರೈತರ ಹಾಗೂ ಕ್ಷೇತ್ರದ ಎಲ್ಲಾ ವರ್ಗದ ಜನರ ಸಂಕಟ ಕಾಲದಲ್ಲಿ ಧ್ವನಿ ಎತ್ತದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕ್ಷೇತ್ರದ ಜನರೆ ಸಂಪೂರ್ಣ ಮರೆತಿದ್ದು, ಮುಂದಿನ ಚುನಾವಣೆ ವೇಳೆಗೆ ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button