ಮೂಲಸೌಲಭ್ಯ ವಂಚಿತ ಕಂಚಿನಕೆರೆ ಗ್ರಾಮ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಕಿರುಗುಂದ ರಫೀಕ್
ಚಿಕ್ಕಮಗಳೂರು: ಮೂಲ ಸೌಕರ್ಯಗಳ ವಂಚಿತ ಬಹಳಷ್ಟು ಹಳ್ಳಿಗಳ, ಕುಗ್ರಾಮಗಳ ಅಭಿವೃದ್ಧಿ ಕಾರ್ಯಗಳು ಶೀಘ್ರವಾಗಿ ನಡೆಯಲೆಂದು ಹಾಗೂ ಜನರಿಗೆ ಹೆಚ್ಚಿನ ಅನುಕೂಲತೆ ದೊರಕಿಸಿಕೊಡುವ ದೃಷ್ಟಿಯಲ್ಲಿ ಜಿಲ್ಲೆಯ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಈಗಾಗಲೇ ಮಾರ್ಪಡಿಸಿದ್ದರೂ ಸಹ ಅಭಿವೃದ್ಧಿ ಎಂಬುದು ಇಲ್ಲಿನ ಜನರ ಪಾಲಿಗೆ ಇನ್ನೂ ಮರೀಚಿಕೆಯಾಗಿಯೇ ಉಳಿಯತೊಡಗಿದೆ.
ಮಲೆನಾಡು ಭಾಗವಾಗಿರುವ ಕಳಸ ವ್ಯಾಪ್ತಿಯಲ್ಲಿ ಬಹಳಷ್ಟು ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿ ಉಳಿದಿವೆ. ಪಟ್ಟಣದ ಕೂಗಳತೆ ದೂರದಲ್ಲಿರುವ ಕಂಚಿನಕೆರೆ ಗ್ರಾಮವನ್ನೊಮ್ಮೆ ನೋಡಿದರೆ ಸಾಕು. ಕಳಸ ತಾಲೂಕಿನ ಅಭಿವೃದ್ಧಿ ಕಾರ್ಯಗಳ ಬಂಡವಾಳ ಬಯಲಾಗುತ್ತದೆ.
ಚುನಾವಣೆ ಬಹಿಷ್ಕರಿಸುತ್ತೇವೆ:

ಕುಡಿಯುವ ನೀರು, ರಸ್ತೆ ಸಹಿತ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸದೆ ನಮ್ಮ ಗ್ರಾಮವನ್ನು ಕಡೆಗಣಿಸಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಎಷ್ಟೇ ಒತ್ತಾಯಿಸಿದರೂ ನಮ್ಮ ಸಮಸ್ಯೆಯನ್ನು ಕೇಳಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ಸ್ಥಳೀಯ ನಿವಾಸಿ ಕಿಟ್ಟಿ ಎಚ್ಚರಿಕೆ ನೀಡಿದ್ದಾರೆ.
“ಪ್ರತೀ ವರ್ಷದ ಮಳೆಗಾಲದ ಅವಧಿಯಲ್ಲಿ ಕೆಸರುಗದ್ದೆಯಂತಹ ರಸ್ತೆಯಲ್ಲಿ ಸಂಚರಿಸುವುದು, ಮನೆ ಅಂಗಳದಲ್ಲಿ ನೀರು ತುಂಬಿಕೊಂಡು ನರಕ ಅನುಭವಿಸುವುದೇ ಆಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮೂಲಸೌಕರ್ಯ ವಂಚಿತರಾಗಿ ನಾವು ಅನಾಗರಿಕರಂತೆ ಬದುಕುತ್ತಿದ್ದೇವೆ”
-ಶರತ್, ಕಂಚಿನಕೆರೆ ನಿವಾಸಿ




