ಚಿಕ್ಕಮಗಳೂರು

ನೋಟಿನ ಕಂತೆ ಕೊಟ್ಟಂತೆ ಮಾಡಿ ದೇವಸ್ಥಾನದ ಹಣಕ್ಕೆ ಬದಲಾಯಿಸಿಕೊಂಡು ಕಣ್​ಕಟ್ ವಂಚನೆ; ಆರೋಪಿಗಳ ಸೆರೆ

ಚಿಕ್ಕಮಗಳೂರು: ನೂರು ರೂಪಾಯಿಗಳ ನೋಟಿನ ಕಂತೆಗಳನ್ನು ಕೊಟ್ಟಂತೆ ಮಾಡಿ, ದೇವಸ್ಥಾನದ ಹಣಕ್ಕೆ ಬದಲಾಯಿಸಿ ಕಣ್ ಕಟ್ ವಂಚನೆ ಮಾಡಿರುವ ಆರೋಪಿಗಳನ್ನು ಕಡೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ದೇವಸ್ಥಾನವೊಂದರ ಕಾಣಿಕೆ ಹುಂಡಿಯ 2000 ಹಾಗೂ 500 ರೂಪಾಯಿ ಮೌಲ್ಯದ ನೋಟುಗಳನ್ನು ನೀಡಿದರೆ, ರೂ.100 ನೋಟಿನ ಕಂತೆಗಳನ್ನು ಲಕ್ಷಕ್ಕೆ ಶೇ.30 ಹೆಚ್ಚುವರಿಯಾಗಿ ಬದಲಾಯಿಸಿಕೊಡುವುದಾಗಿ ನಂಬಿಸಿ ಕಡೂರಿಗೆ ಕರೆಸಿ ದೇವಸ್ಥಾನದವರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ.

ದೇವಸ್ಥಾನದ ಕಾಣಿಕೆ ಹುಂಡಿಯ 10 ಲಕ್ಷ ಹಣವನ್ನು ಕೊಟ್ಟು ಶೇ.30 ಹೆಚ್ಚುವರಿ ಹಣ ಪಡೆಯಲೆಂದು ಬಂದಿದ್ದವರಿಗೆ ವಂಚಿಸಿರುವ ಆರೋಪಿಗಳು ಬ್ಯಾಗಿನಲ್ಲಿ ನಿಮಗೆ ಹೆಚ್ಚುವರಿ 3 ಲಕ್ಷ ಸೇರಿ 13 ಲಕ್ಷ ಹಣ ಇದೆ. ಇಲ್ಲಿ ಜನ ಓಡಾಡುತ್ತಿದ್ದಾರೆ, ವಾಹನದ ಒಳಗೆ ಕುಳಿತು ಸಂಪೂರ್ಣ ಹಣವನ್ನು ಎಣಿಸಿಕೊಳ್ಳಿ ಎಂದು ನಂಬಿಸಿ, ಆರೋಪಿಗಳು ಅಲ್ಲಿಂದ ಕಣ್ಮರೆಯಾಗಿದ್ದರು.

ಇತ್ತ ದೇವಸ್ಥಾನದವರು ಹಣ ಎಣಿಸಲೆಂದು ಬ್ಯಾಗ್ ತೆರೆದು ನೋಡಿದಾಗ ನೋಟಿನ ಕಂತೆಗಳ ಮೇಲ್ಭಾಗದಲ್ಲಿ ಮಾತ್ರ ನೂರು ರೂಪಾಯಿ ಮುಖಬೆಲೆಯ ನೋಟುಗಳಿದ್ದವು. ಉಳಿದಿದ್ದೆಲ್ಲವೂ ಬಿಳಿ ಪೇಪರ್ ಕಂತೆಯಾಗಿತ್ತು ಎಂಬುದು ನಂತರ ಗೊತ್ತಾಗಿದೆ.

ಈ ಕುರಿತು ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಕಣ್ ಕಟ್ ವಂಚನೆ ಮಾಡಿರುವ 6 ಮಂದಿ ಆರೋಪಿಗಳ ಪೈಕಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕಡೂರು ಪಿಎಸ್ಐ ಎನ್ ಕೆ ರಮ್ಯ ಅವರ ನೇತೃತ್ವದ ತಂಡ ಕಾರ್ಯಾಚರಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳಿಂದ 5.10 ಲಕ್ಷ ಹಣ, ಓಮಿನಿ ಕಾರು, ಸ್ಕೂಟಿ ಹಾಗೂ ನಾಲ್ಕು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button