ಚಿಕ್ಕಮಗಳೂರು
ನೆಲೆ ಕಳೆದುಕೊಂಡು ಎರಡು ವರ್ಷಗಳಾದರೂ ಪರಿಹಾರ ನೀಡದೆ ನಿರ್ಲಕ್ಷ್ಯ; ಮಲೆಮನೆ ಗ್ರಾಮಸ್ಥರ ಪ್ರತಿಭಟನೆ
ಚಿಕ್ಕಮಗಳೂರು: ಕಳೆದೆರಡು ವರ್ಷಗಳ ಹಿಂದೆ ಸುರಿದ ಮಹಾಮಳೆಗೆ ಮಲೆಮನೆ ಗ್ರಾಮದಲ್ಲಿ ನೆಲೆ ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮೂಡಿಗೆರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಲೆನಾಡಿನಲ್ಲಿ ಕಳೆದ 2019ರಲ್ಲಿ ಭಾರೀ ಮಳೆಗೆ ಭೂಕುಸಿತ, ಪ್ರವಾಹ ಪರಿಸ್ಥಿತಿ ಉಂಟಾದಾಗ ಮಲೆಮನೆ ಗ್ರಾಮದ ಅಶ್ವಥ್, ರಾಜೇಶ್, ರಾಜು, ಸತೀಶ್, ರವಿ, ಚಂದ್ರೇಗೌಡರ ಮನೆಗಳು ಸಂಪೂರ್ಣ ನೆಲಸಮವಾಗಿದ್ದವು. ಆದರೆ ಸಂತ್ರಸ್ತರಿಗೆ ಸರ್ಕಾರದಿಂದ ಇದುವರೆಗೂ ಪರಿಹಾರ ದೊರಕಿಲ್ಲ. ಶಾಸಕರು, ಸಂಸದರು, ಸಚಿವರು, ಮುಖ್ಯಮಂತ್ರಿಗಳು ಹೀಗೆ ಎಲ್ಲರೂ ಬಂದು ಹೋದರೆ ವಿನಃ ಈವರೆಗೂ ಇವರಿಗೆ ಶಾಶ್ವತ ನೆಲೆ ಕಲ್ಪಿಸಿ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಮತ್ತು ಕಂದಾಯ ಇಲಾಖೆ ನಡುವಿನ ಹಗ್ಗಜಗ್ಗಾಟದೊಂದಿಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಮೀನಾಮೇಷ ಸಂತ್ರಸ್ತರನ್ನು ಬೀದಿಗೆ ತಂದು ನಿಲ್ಲಿಸಿದೆ. ಒಂದು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು.




