ರೈತರ ಬೇಡಿಕೆ ಈಡೇರಿಸುವಂತೆ ಇಂಧನ ಸಚಿವರಿಗೆ ಶಾಸಕ ಎಂ ಪಿ ಕುಮಾರಸ್ವಾಮಿ ಮನವಿ

ಚಿಕ್ಕಮಗಳೂರು: ರೈತರಿಗೆ ನೆರವಾಗುವಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಾಸಕ ಎಂ ಪಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್) ದಿಂದ ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ರೈತರಿಗೆ 10 ಹೆಚ್ ಪಿ ವರೆಗಿನ ವಿದ್ಯುತ್ ಸಂಪರ್ಕವನ್ನು ಪಂಪ್‌ಸೆಟ್‌ಗಳಿಗೆ ಉಚಿತವಾಗಿ ಒದಗಿಸಬೇಕು. ಈವರೆಗೆ ರೈತರ ವಿದ್ಯುತ್ ಪಂಪ್‌ಸೆಟ್ಗಳಿಗೆ ಬಳಸಿರುವ ವಿದ್ಯುತ್ ಬಿಲ್ ಪಾವತಿಸುವುದು ಬಾಕಿ ಉಳಿದಿದ್ದು, ಮುಂದಿನ ನಾಲ್ಕು ಕಂತುಗಳಿಗೆ ವಿಂಗಡಿಸಿ, ಆ ಹಣವನ್ನು ಪಾವತಿ ಮಾಡಲು ಕಾಲಾವಕಾಶ ನೀಡಬೇಕು ಮತ್ತು ಬಡ್ಡಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಭೇಟಿಯ ವೇಳೆ ಕೆಜಿಎಫ್ ಅಧ್ಯಕ್ಷ ಡಾ.ಹೆಚ್.ಟಿ.ಮೋಹನ್‌ಕುಮಾರ್, ರಾಜೀವ್, ಕೆ ಕೆ ವಿಶ್ವನಾಥ್, ಹಳಸೆ ಶಿವಣ್ಣ, ಯತೀಶ್ ಬೆಳಗೋಡು, ಎಂ ವಿ ರತ್ನಾಕರ್ ಇದ್ದರು.

“ರೈತರು ಪ್ರಸಕ್ತ ಸಂದರ್ಭದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಇಂಧನ ಸಚಿವರಿಗೆ ಮನವಿ ಮಾಡಿ ಗಮನ ಸೆಳೆದಿದ್ದೇವೆ. ಪಂಪ್‌ಸೆಟ್‌ಗೆ ಬಳಸಿರುವ ವಿದ್ಯುತ್ ಬಾಕಿ ಬಿಲ್ ಪಾವತಿಸಲು ಕಾಲಾವಕಾಶ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಇಂಧನ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.”
-ಎಂ ಪಿ ಕುಮಾರಸ್ವಾಮಿ, ಶಾಸಕ




