ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ; ಕೃಷಿಕರೋರ್ವರ ಏಕಾಂಗಿ ಪ್ರತಿಭಟನೆ

ಚಿಕ್ಕಮಗಳೂರು: ಸರ್ವೆ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಕೃಷಿಕರೋರ್ವರು ಸರ್ವೆ ಇಲಾಖೆ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿದರು.
ಭೂಮಿ ಸಂಬಂಧಿತ ಸರ್ವೆ ಕಾರ್ಯವನ್ನು ಮಾಡಿಕೊಡುವಂತೆ ಹಳಿಯೂರು ಗ್ರಾಮದ ಪುಟ್ಟಸ್ವಾಮಿಗೌಡ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆಗ ಎಲ್ಲಾ ಕೆಲಸಗಳನ್ನು ತಾನೇ ಮಾಡಿಕೊಡುವುದಾಗಿ ಸರ್ವೇಯರ್ ಓರ್ವರು ಸುಮಾರು 17 ಸಾವಿರ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿರುವ ಅವರು, ಕಳೆದ ಎಂಟು ತಿಂಗಳಿನಿಂದ ತಮ್ಮ ಕೆಲಸವಾಗದೇ ಇದ್ದಿದ್ದಕ್ಕೆ ಬೇಸತ್ತ ಪುಟ್ಟಸ್ವಾಮಿಗೌಡ ಪ್ರತಿಭಟನೆ ನಡೆಸಿದರು.
ಕಚೇರಿ ಮುಂದೆ ಪ್ರತಿಭಟನೆ ಆರಂಭಿಸುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕ್ಷಣಮಾತ್ರದಲ್ಲಿ ಕೆಲಸಮಾಡಿ ಕಳುಹಿಸಿಕೊಟ್ಟಿರುವ ಘಟನೆಯೂ ನಡೆಯಿತು. ಸರ್ವೆ ಇಲಾಖೆಯಲ್ಲಿ ತಿಮಿಂಗಿಲಗಳು ಬೀಡು ಬಟ್ಟಿದ್ದು ಹಣ ಕೊಡದೆ ಇವರು ಯಾವುದೇ ಕೆಲಸ ಮಾಡುತಿಲ್ಲ ಎಂಬ ಸಾರ್ವಜನಿಕರ ಆರೋಪಕ್ಕೆ ಈ ಘಟನೆ ಪುಷ್ಠಿ ನೀಡಿದೆ. ಭ್ರಷ್ಟ ಸರ್ವೆಯರನ್ನು ತಕ್ಷಣ ಅಮಾನತುಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.




