ಚಾರ್ಮಾಡಿ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗದಂತೆ ಕ್ರಮ; ಉಪಸಭಾಪತಿ ಎಂ.ಕೆ ಪ್ರಾಣೇಶ್

ಚಿಕ್ಕಮಗಳೂರು: ಭೂಕುಸಿತದ ಅನಾಹುತಕಾರಿ ಚಾರ್ಮಾಡಿ ಕಣಿವೆಗೆ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹಾಗೂ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಭೇಟಿ ನೀಡಿದ್ದರು.
ಭಾರೀ ಮಳೆಗೆ ಘಾಟಿ ರಸ್ತೆಯಲ್ಲಿ ಮಣ್ಣು ಕುಸಿದು ಸಂಚಾರ ದುಸ್ತರವಾಗಿತ್ತು. ಅತ್ತ ಶಿರಾಡಿ ಘಾಟಿಯಲ್ಲೂ ರಸ್ತೆ ಕುಸಿದ ಕಾರಣ ಆ ರಸ್ತೆಯ ವಾಹನಗಳು ಚಾರ್ಮಾಡಿ ರಸ್ತೆಯಲ್ಲಿ ಸಂಚರಿಸತೊಡಗಿದ್ದರಿಂದ ಅಪಾಯದ ಸನ್ನಿವೇಶ ಹೆಚ್ಚಾಗಿತ್ತು.
6ನೇ ತಿರುವುನಲ್ಲಿ ಭೂ ಕುಸಿತವಾಗಿತ್ತು. ನಾಲ್ಕು ಹಿಮ್ಮುರಿ ತಿರುವುಗಳಲ್ಲಿ ತಡೆಗೋಡೆ ಅಪಾಯದ ಸ್ಥಿತಿಯಲ್ಲಿದ್ದರಿಂದ ರಾತ್ರಿ 7 ರಿಂದ ಬೆಳೆಗ್ಗೆ 5 ರವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿರ್ಬಂಧಿಸಿತು
ಇಂದು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ 9 ಗಂಟೆಯವರೆಗೂ ಲಘುವಾಹನ ಸಂಚರಿಸಲು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಚರ್ಚಿಸಿ ಪ್ರಯಾಣಿಕರಿಗೆ ಸಂಚರಿಸಲು ಅನುಕೂಲವಾಗುವಂತೆ ಇನ್ನೂ ಎರಡು ಮೂರು ದಿನದಲ್ಲಿ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಶಾಸಕ ಎಂ.ಪಿ .ಕುಮಾರಸ್ವಾಮಿ, ಜಿಲ್ಲಾಡಳಿತ ಜೊತೆ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಧರ್ಮಸ್ಥಳ ಹೋಗುವ ಪ್ರಯಾಣಿಕರಿಗೆ 9 ಗಂಟೆಯವರೆ ಸಂಚರಿಸಲು ಮಾತಾಡುತ್ತೇನೆ ಎಂದರು.
ಕಳಸ ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಿ ಚೆಕ್ ಪೋಸ್ಟ್ ಬಳಿ ಹಾಕುವಂತೆ ವರ್ತಕರು ಮನವಿ ಮಾಡಿದರು.
ಕೂಡಲೇ ಪ್ರಾಣೇಶ್ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಫೋನಿನಲ್ಲಿ ಕರೆ ಮಾಡಿ ಸ್ಥಳದಲ್ಲಿದ್ದ ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿಗೆ ಬ್ಯಾರಿಕೇಡ್ ತೆಗೆದು ಚೆಕ್ ಪೋಸ್ಟ್ ಬಳಿ ಹಾಕುವಂತೆ ಸೂಚನೆ ಕೊಟ್ಟರು.




