ಬಸ್ ಪ್ರಯಾಣದ ವೇಳೆ ಮೊಬೈಲ್‌ನಿಂದ ಜೊರಾದ ಶಬ್ದ ಬರುವಂತಿಲ್ಲ: ಸಾರಿಗೆ ನಿಗಮ ಖಡಕ್ ಎಚ್ಚರಿಕೆ

ಕಲಬುರ್ಗಿ: ಬಸ್ ಪ್ರಯಾಣದ ವೇಳೆ ಮೊಬೈಲ್ ಗಳಿಂದ ಪ್ರಯಾಣಿಕರಿಗೆ ಆಗುವ ಕಿರಿಕಿರಿ ತಪ್ಪಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಖಡಕ್ ಹೆಜ್ಜೆ ಇಟ್ಟಿದೆ.
ಸಾರ್ವಜನಿಕ ಪ್ರಯಾಣಿಕರಿಗೆ ಗುಣಮಟ್ಟದ ಸಾರಿಗೆ ಸೌಲಭ್ಯ ಒದಗಿಸಲು ಹಲವು ಕ್ರಮಗಳನ್ನು ಕೈಗೊಂಡಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಕರ್ನಾಟಕ ಮೋಟಾರು ವಾಹನಗಳ 1989ರ ನಿಯಮ 94 (l) (V) ರ ಅನುಸಾರ ನಿಗಮದ ಬಸ್‌ಗಳಲ್ಲಿ ಪ್ರಯಾಣಿಕರು ಮೊಬೈಲ್ ದೂರವಾಣಿ ಮೂಲಕ ಜೋರಾಗಿ ಶಬ್ದದೊಂದಿಗೆ ಹಾಡು/ಪದ್ಯ/ವಾರ್ತೆ/ಸಿನಿಮಾ ಇತ್ಯಾದಿ ಕೇಳುವದು ಶಬ್ದ ಹೊರಸೂಸುವದು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಬಸ್ ಪ್ರಯಾಣದ ವೇಳೆ ಮೊಬೈಲ್ ಗಳಲ್ಲಿ ಜೋರಾಗಿ ಸದ್ದು ಇಟ್ಟು ಪಕ್ಕದವರಿಗೆ ತೊಂದರೆ ಕೊಡುವಂತಿಲ್ಲ, ಹಾಗೆ ಮಾಡಿದ್ರೆ ಬಸ್‌ನಿಂದ ಕೆಳಗೆ ಇಳಿಸಲಾಗುತ್ತದೆ. ಟಿಕೇಟ್ ಹಣ ಕೂಡಾ ಹಿಂದಿರುಗಿಸುವದಿಲ್ಲ ಅಂತ ಸಾರಿಗೆ ನಿಗಮ ಖಡಕ್ ಸೂತ್ತೋಲೆಯಲ್ಲಿ ತಿಳಿಸಿದೆ. ಬಸ್ ಪ್ರಯಾಣದ ವೇಳೆ ಮೊಬೈಲ್ನಿಂದ ಜೋರಾಗಿ ಶಬ್ದ ಹೊರಸೂಸುವ ಮೂಲಕ ಸಹಪ್ರಯಾಣಿಕರಿಗೆ ತೊಂದರೆಯಾಗುವಂತೆ ನಡೆದುಕೊಂಡು ಕರ್ನಾಟಕ ಮೋಟಾರು ವಾಹನಗಳ ನಿಯಮ ಉಲ್ಲಂಘನೆ ಮಾಡುವವರಿಗೆ ಮೊದಲು ಚಾಲಕ-ನಿರ್ವಾಹಕರು ತಿಳಿಸಿ ಹೇಳಬೇಕು. ವಿನಂತಿಗೂ ಮನ್ನಣೆ ಕೊಡದಿದ್ದರೆ ಅಂತವರನ್ನು ಬಸ್ಸಿನಿಂದ ಕೆಳಗಿಳಿಸಲಾಗುವದು. ಬಸ್ಸಿನಿಂದ ಕೆಳಗೆ ಇಳಿಯುವವರೆಗೆ ಬಸ್ ಮುಂದೆ ಹೋಗುವಂತ್ತಿಲ್ಲ ಅಂತ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.
ಈ ಮುಂಚೆಯೂ ನಿಯಮವಿತ್ತು,ತೊಂದರೆಗೆ ಒಳಗಾದವರು ದೂರು ನೀಡಿದ್ರೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದ್ರೆ ದೂರು ನೀಡುವ ಹಂತದವರೆಗೆ ಪ್ರಯಾಣಿಕರು ಮುಂದಾಗುತ್ತಿರಲಿಲ್ಲ, ತೊಂದರೆಯಲ್ಲಿಯೇ ಪ್ರಯಾಣ ಬೆಳೆಸುತ್ತಿದ್ದರು. ತೊಂದರೆ ತಪ್ಪಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸ ಸುತ್ತೋಲೆ ಹೊರಡಿಸಿದೆ. ನಿನ್ನೆಯಿಂದಲೇ ನೂತನ ನಿಯಮ ಜಾರಿಗೆ ಬಂದಿದೆ. ಪ್ರಯಾಣಿಕರು ಸಹಕರಿಸಬೇಕು ಅಂತ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ.




