ಸಿಕ್ಕ ಸಿಕ್ಕವರನ್ನು ಕಚ್ಚುವುದೇ ಸಿ ಟಿ ರವಿ ಅಭ್ಯಾಸ: ಶಾಸಕ ಕುಮಾರಸ್ವಾಮಿ ವಾಗ್ದಾಳಿ

ಚಿಕ್ಕಮಗಳೂರು: ಎದುರಿಗೆ ಸಿಕ್ಕವರನ್ನ ಕಚ್ಚುವುದು ಸಿ ಟಿ ರವಿ ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಈಗ ನನ್ನನ್ನೇ ಕಚ್ಚತೊಡಗಿದ್ದಾರೆ ಎಂದು ಸ್ವಪಕ್ಷದ ಶಾಸಕ ಎಂ ಪಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನೆನಪಾದವರನ್ನು, ಅಡ್ಡ ಸಿಕ್ಕಿದವರನ್ನು ಕಚ್ಚಿಕೊಂಡೇ ಓಡಾಡುತ್ತಿದ್ದಾರೆ. ದಿಲ್ಲಿಯಿಂದ ಇಲ್ಲಿಯವರೆಗೆ ಸಿಕ್ಕ ಸಿಕ್ಕವರಿಗೆ ಕಚ್ಚಿಕೊಂಡು ಕೊನೆಗೆ ಇಲ್ಲಿ ಬಂದು ನನ್ನನ್ನೇ ಕಚ್ಚಿದ್ದಾರೆ ಎಂದು ಆಕ್ರೋಶದಿಂದ ಪ್ರತಿಕ್ರಿಯಿಸಿದರು.
ನಾವಿಬ್ಬರೂ ಒಂದೇ ಜಿಲ್ಲೆಯವರು ಕುಳಿತು ಮಾತನಾಡಬೇಕು. ಅವರ ಮಾತಿಗೆಲ್ಲಾ ಉತ್ತರ ಕೊಡುವುದು ಅಪ್ರಸ್ತುತ ಎಂದ ಅವರು, ಈಗ ನಾನು ಸಚಿವ ಸ್ಥಾನವನ್ನು ಕೇಳುವ ಸಮಯ ಬಂದಿಲ್ಲ. ಸಮಯ ಬಂದಾಗ ಎಲ್ಲರಿಗಿಂತ ಮೊದಲು ನಾನೇ ಕೇಳುತ್ತೇನೆ ಎಂದೂ ಹೇಳಿದರು.
ಕ್ಷೇತ್ರದ ಸಮಸ್ಯೆಯನ್ನು ಮನವರಿಕೆ ಮಾಡಿದ್ದರಿಂದ ಕಂದಾಯ ಸಚಿವ ಆರ್ ಅಶೋಕ್ ಕಷ್ಟ ಅರಿತು ಸ್ಪಂದಿಸಿದ್ದಾರೆ. ಸಮಸ್ಯೆ ಬಗೆಹರಿಸಿದ್ದಾರೆ. ತಡವಾಗಿಯಾದರೂ ಮೂಡಿಗೆರೆ ಕ್ಷೇತ್ರವನ್ನು ಅತೀವೃಷ್ಟಿ ಪೀಡಿತ ಪಟ್ಟಿಗೆ ಸೇರಿಸಿದ್ದಾರೆ ಎಂದು ಹೇಳಿದರು.
