ಬೆಳಗಾವಿ

ಅತ್ಯಾಚಾರ ಪ್ರಕರಣ; ಬೆಳಗಾವಿ ಗ್ರಾಮೀಣ ಎಸಿಪಿ ವಿರುದ್ಧ ಡಿಸಿಗೆ ದೂರು

ಬೆಳಗಾವಿ: ಅತ್ಯಾಚಾರ ಕೇಸ್‍ನಲ್ಲಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಎಸಿಪಿ ಗಣಪತಿ ಗುಡಾಜಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯವಾದಿಗಳ ಸಮ್ಮುಖದಲ್ಲಿ ನೊಂದ ಮಹಿಳೆ ಜಿಲ್ಲಾಧಿಕಾರಿಗಳ ಮೊರೆ ಹೋಗಿರುವ ಘಟನೆ ನಡೆದಿದೆ.

ಹೌದು ಬೆಳಗಾವಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದ ಓರ್ವ ಮಹಿಳೆ ಮೇಲೆ ಅತ್ಯಾಚಾರ ಆಗಿದೆ ಎಂದು ಇದೇ ಸೆಪ್ಟೆಂಬರ್ 12ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ರಾಜಿ ಸಂಧಾನ ಮೂಲಕ ಬಗೆಹರಿಸಲು ಎಸಿಪಿ ಗಣಪತಿ ಗುಡಾಜಿ ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ.

ತನಿಖೆಗಾಗಿ ನೊಂದ ಮಹಿಳೆ ಮತ್ತು ಆರೋಪಿಯನ್ನು ಠಾಣೆಗೆ ಕರೆಸಿದ್ದ ಎಸಿಪಿ ಬೆಳಿಗ್ಗೆಯಿಂದ ಸಾಯಂಕಾಲ 4 ಗಂಟೆವರೆಗೂ ಸಂಧಾನಕ್ಕೆ ಯತ್ನಿಸಿದ್ದರು. ಇಷ್ಟಾದ್ರೂ ಸಂಧಾನ ಆಗದ ಹಿನ್ನೆಲೆ ಮಹಿಳೆ ಮತ್ತು ಆರೋಪಿಯನ್ನು ಒಂದೇ ವಾಹನದಲ್ಲಿ ಹುಂಚ್ಯಾನಟ್ಟಿಗೆ ಕರೆದುಕೊಂಡು ಹೋಗಿ ಮಹಿಳೆ ಮನೆ ಮುಂದೆ ಇಬ್ಬರ ಫೋಟೋವನ್ನು ತೆಗೆಸಿದ್ದರು. ಈ ಮೂಲಕ ಆರೋಪಿ ವಿರುದ್ಧ ಕ್ರಮ ಕೈಗೊಳ್ಳದೇ, ಮಹಿಳೆಯ ಮರ್ಯಾದೆಯನ್ನು ಹಾಳು ಮಾಡುವ ಕೆಲಸ ಮಾಡಿರುವ ಎಸಿಪಿ ಗುಡಾಜಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುರುವಾರ ಡಿಸಿ ಮಹಾಂತೇಶ ಹಿರೇಮಠ ಅವರನ್ನು ನೊಂದ ಮಹಿಳೆ ನ್ಯಾಯವಾದಿಗಳ ಸಮ್ಮುಖದಲ್ಲಿ ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾಳೆ.

Related Articles

Leave a Reply

Your email address will not be published. Required fields are marked *

Back to top button