ಬೆಳಗಾವಿ

ಸಬ್ ರಿಜಿಸ್ಟ್ರಾರ್ ಲಂಚದ ಕಾಟಕ್ಕೆ ಬೇಸತ್ತ ಬಾಂಡ್ ರೈಟರ್; ಕ್ರಮ ಜರುಗಿಸುವಂತೆ ಪ್ರತಿಭಟನೆ

ವರದಿ: ಮಲಿಕ್ ಬೆಳಗಲಿ

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರತಿನಿತ್ಯ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ನಿತ್ಯದ ಹಣ ವಸೂಲಿಗೆ ಸಬ್ ರಿಜಿಸ್ಟ್ರಾರ್ ಹಾಗೂ ಹಿರಿಯ ಅಧಿಕಾರಿಗಳು ಸಾತ್ ನೀಡುತ್ತಿದ್ದು ಈಗ ಜಗಜ್ಜಾಹೀರಾಗಿದೆ.

ರಾಮದುರ್ಗದ ಸಬ್ ರಿಜಿಸ್ಟ್ರಾರ್ ವಲಯದಲ್ಲಿ ಕಾರ್ಯ ನಿರ್ವಹಿಸುವ ಬಾಂಡ್ ರೈಟರ್ ಇವರ ಕಾಟಕ್ಕೆ ಬೇಸತ್ತು ಮಾಧ್ಯಮದ ಮುಂದೆ ಸಬ್ ರಿಜಿಸ್ಟ್ರಾರ್ ನನ್ನು ಬೆತ್ತಲಾಗಿಸಿದ್ದಾನೆ. ಜಮೀನು, ಸೈಟ್ ಸೇರಿದಂತೆ ಅನೇಕ ನೋಂದಣಿ ಕೆಲಸಕ್ಕೆ ಹಣ ಕೊಡದೆ ಸಹಿ ಮಾಡುವುದಿಲ್ಲ ಎನ್ನುವುದನ್ನ ಕಚೇರಿಯಲ್ಲಿ ಭ್ರಷ್ಟ ಅಧಿಕಾರಿ ಮುಂದೆಯೇ ಹೇಳಿದ್ದಾನೆ.

ಬಾಂಡ್ ರೈಟರ್ ಅಲ್ತಾಫ್ ಸುರುಪುರ ಕಳೆದ ದಿನ ಮಾಧ್ಯಮ ಪ್ರತಿನಿಧಿಗಳನ್ನ ನೋಂದಣಿ ಕಚೇರಿಗೆ ಕರೆಯಿಸಿ ಹೇಳಿಕೆ ನೀಡಿದ್ದು, ಭ್ರಷ್ಟ ಸಬ್ ರಿಜಿಸ್ಟ್ರಾರ್ ಅಧಿಕಾರಿ ಪಂಚಾಕ್ಷರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದಾನೆ.

ಹಳ್ಳಿಯ ಮನೆ ಖರೀದಿಗೆ 5000 ರೂಪಾಯಿ ಲಂಚ, ಪಟ್ಟಣದ ಮನೆ ಖರೀದಿಗೆ 10 ಸಾವಿರ ಲಂಚ, ಒಂದು ಎಕರೆ ಜಮೀನು ಖರೀದಿಗೆ1000 ಸಾವಿರದಿಂದ 2 ಸಾವಿರ ವರೆಗೆ ಲಂಚ , ಬಯಲು ಜಾಗ ಖರೀದಿಗೆ 5000 ಸಾವಿರ ಲಂಚ ನೀಡಿದರೆ ಮಾತ್ರ ಕೆಲಸ ಮಾಡುವುದಾಗಿ ಬಾಂಡ್ ರೈಟರ್ ಗಳಿಗೆ ಪಂಚಾಕ್ಷರಿ ಬೇಡಿಕೆ ಇಡುತ್ತಾನೆ ಎಂದು ಅಲ್ತಾಫ್ ಹೇಳಿದ್ದಾನೆ.

ದಿನಕ್ಕೆ 20 ಸಾವಿರ ಹಣವನ್ನು ಪಂಚಾಕ್ಷರಿ ತನ್ನ ಹಿರಿಯ ಅಧಿಕಾರಿಗಳಿಗೆ ತಲುಪಿಸುತ್ತಾನೆ ಎಂದು ಹೇಳಲಾಗುತ್ತಿದೆ. ಇನ್ನು ಲಂಚ ನೀಡಿರುವ ಅಲ್ತಾಫ್ ಸ್ವತಃ ಆರೋಪ ಮಾಡಿದ್ದರೂ ಹಿರಿಯ ಅಧಿಕಾರಿಗಳು ಇದುವರೆಗೂ ಭ್ರಷ್ಟ ಅಧಿಕಾರಿ ಮೇಲೆ ಕ್ರಮ ಕೈಗೊಂಡಿಲ್ಲ.

ರಾಜಾರೋಷವಾಗಿ ನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಇದೆ ಮೊದಲೇನಲ್ಲಾ ಆದರೆ ಭ್ರಷ್ಟಾಚಾರ ಮಿತಿಮೀರಿ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ತೀರ ಅಸಹ್ಯ ಎನ್ನಿಸುವಂತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button