5 ಕೋಟಿ ರೂ. ವಸೂಲಿಗೆ ಬಂದ ಬ್ಯಾಂಕ್ ಅಧಿಕಾರಿಗಳು: ಸಹೋದರಿಯರಿಗೆ ದಿಗಿಲು ಆಗಿದ್ದಾದರೂ ಏನು…?

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮಕ್ಕೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ವಸೂಲಿಗೆ ಬ್ಯಾಂಕ್ ಅಧಿಕಾರಿಗಳು ಬಂದ ಘಟನೆ ನಡೆದಿದೆ.
5 ಕೋಟಿ ರೂಪಾಯಿ ಸಾಲ ವಸೂಲಿಗೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಬಂದಿದ್ದು, ಈ ವೇಳೆ ಪರಿಶೀಲನೆ ನಡೆಸಿ ಹೋಗಿದ್ದಾರೆ.
ದಾಗಿನಕಟ್ಟೆ ವಿಧವೆಯರಾದ ಗೀತಮ್ಮ, ಸಾವಿತ್ರಮ್ಮ ಮನೆಗೆ ಬಂದಿದ್ದ ಅಧಿಕಾರಿಗಳು, ಗೀತಮ್ಮ ರೂ. 2.4 ಕೋಟಿ, ಸಾವಿತ್ರಮ್ಮ ಹೆಸರಲ್ಲಿ ರೂ.2 ಕೋಟಿ ಸಾಲ ಪಡೆಯಲಾಗಿದೆ. 2013-14ನೇ ಸಾಲಿನಲ್ಲಿ ಇಬ್ಬರ ಮಹಿಳೆಯರ ಹೆಸರಿನಲ್ಲಿ ಸಾಲ ಮಾಡಲಾಗಿದ್ದು, ಆದ್ರೆ ನಾವು ಸಾಲ ತೆಗೆದುಕೊಂಡಿಲ್ಲ, ಸಾಲದ ಬಗ್ಗೆ ಗೊತ್ತಿಲ್ಲ ಎಂದು ಮಹಿಳೆಯರು ಹೇಳುತ್ತಿದ್ದಾರೆ. ಇದ್ದಕ್ಕಿದ್ದಂತೆ ಬಂದು ಸಾಲ ಕಟ್ಟಿ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆಯೇ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಲ ನೀಡುವಾಗ ಮನೆ ಪರಿಶೀಲನೆ ನಡೆಸದ ಅಧಿಕಾರಿಗಳು 8 ವರ್ಷಗಳಿಂದ ಏನು ಕೇಳದೆ ಈಗ ದಿಢೀರೆಂದು ಮನೆಗೆ ಬಂದು ಸಾಲ ವಸೂಲಾತಿಗೆ ಬಂದಿರುವುದು ಯಾಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ನಲ್ಲಿ ಗೀತಮ್ಮ, ಸಾವಿತ್ರಮ್ಮ ಹೆಸರಿನಲ್ಲಿ ಸಾಲ ಪಡೆಯಲಾಗಿತ್ತು ಎಂಬುದು ಅಧಿಕಾರಿಗಳ ವಾದ ಆದ್ರೆ, ಸಾಲ ಪಡೆದ ಬಗ್ಗೆ ಮಾಹಿತಿಯೇ ಇಲ್ಲ ಎಂದು ಮಹಿಳೆಯರು ಗೋಳಿಡುತ್ತಿದ್ದಾರೆ.
ಘಟನೆ ಹಿನ್ನೆಲೆ ಏನು…?
ಗೀತಮ್ಮ, ಸಾವಿತ್ರಮ್ಮ ಸಹೋದರಿಯರು. ಇಬ್ಬರ ತವರು ಚನ್ನಗಿರಿ ತಾಲೂಕಿನ ಸೋಮ್ಲಾಪುರ. ಇವರ ತಂದೆಗೆ 4 ಪುತ್ರರು, 4 ಪುತ್ರಿಯರು. ಇಬ್ಬರೂ ಸಹೋದರಿಯರು ದಾಗಿನಕಟ್ಟೆಯ ರಂಗಸ್ವಾಮಿ, ಜಗದೀಶ ಎಂಬ ಸಹೋದರರಿಗೆ ಮದುವೆಯಾಗಿದ್ರು. ರಂಗಸ್ವಾಮಿ, ಜಗದೀಶ ಮೃತರಾಗಿ 16 ವರ್ಷವಾಯ್ತು. ಅತ್ತೆ-ಮಾವ ಮೃತರಾಗಿ ಮೂರು ವರ್ಷವಾಯ್ತು. ಮನೆತನಕ್ಕೆ 5 ಎಕರೆ ಜಮೀನಿತ್ತು. ಇವರ ಹೆಸರಿನಲ್ಲಿ ಅವರ ತಮ್ಮ ಜಗದೀಶನ ಹೆಂಡತಿ ಶೋಭಾ ಶಿವಮೊಗ್ಗದ ಡಿಸಿಸಿ ಮ್ಯಾನೇಜರ್ ಆಗಿದ್ರು. ಜಗದೀಶ್ ಬೆಸ್ಕಾಂ ಉದ್ಯೋಗಿ ಆಗಿದ್ದು, ಇಬ್ಬರೂ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ.
ಗೀತಮ್ಮ, ಸಾವಿತ್ರಮ್ಮ ಅವರಿಗೆ ವಿಧವಾವೇತನಾ ಮಾಡಿಸಿಕೊಡುವುದಾಗಿ ಇಬ್ಬರ ಆಧಾರ್ ಕಾರ್ಡ್ ಜೆರಾಕ್ಸ್ ಪಡೆದಿದ್ದ ಶೋಭಾ, ಇದೇ ಆಧಾರ್ ಕಾರ್ಡ್ ಅಧಾರದಲ್ಲಿ ನಕಲಿ ಚಿನ್ನ ಇಟ್ಟು 4.5 ಕೋಟಿ ಸಾಲ ಪಡೆದಿದ್ರು. ಇವರ ಹೆಸರಲ್ಲಿ ಬ್ಯಾಂಕಿನ ಯಾವುದೇ ನೋಟಿಸ್ ಬಂದ್ರು ತಮಗೆ ಕಳುಹಿಸುವಂತೆ ಶೋಭಾ ಹೇಳಿದ್ರು. ಈ ಘಟನೆ ನಡೆದು 7 ವರ್ಷವಾಯ್ತು. ಇದಕ್ಕೆಲ್ಲಾ ಶೋಭಾ ಅವರೇ ಕಾರಣ ಎನ್ನುವುದು ಸಹೋದರಿಯರ ಆರೋಪ.
ಈ ಸಾಲದ ಬಗ್ಗೆ ಗೀತಮ್ಮ, ಸಾವಿತ್ರಮ್ಮನಿಗೆ ಮಾಹಿತಿಯೂ ಇರಲಿಲ್ಲ. ಬ್ಯಾಂಕಿನವರು ಮನೆಗೆ ಬಂದಾಗಲೇ ತಮ್ಮ ಹೆಸರಲ್ಲಿ ಶೋಭಾ ಸಾಲ ಮಾಡಿದ್ದು ಗೊತ್ತಾಗಿದ್ದು, ಈ ಬಗ್ಗೆ ಕೂಲಂಕುಷ ತನಿಖೆ ನಡೆಸುವಂತೆ ಸಹೋದರಿಯರು ಒತ್ತಾಯಿಸಿದ್ದಾರೆ. ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




