Latestಬೆಂಗಳೂರು ಗ್ರಾಮಾಂತರ

ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ

ದೇವನಹಳ್ಳಿ: ನಾಡಿನ ಗುರುಪರಂಪರೆಯ ಶ್ರೇಷ್ಠ ಸಂತ, ಶತಾಯುಷಿ, ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಕೇಂದ್ರ ಸರ್ಕಾರ ‘ಭಾರತ ರತ್ನ’ ಗೌರವ ನೀಡಿ ಗೌರವಿಸಬೇಕು ಎಂದು ನಾಗರಿಕರ ಹಿತರಕ್ಷಣಾ ವೇದಿಕೆ ಹಾಗೂ ಬಿಕೆಎಸ್ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶಿವಪ್ಪ ಆಗ್ರಹಿಸಿದ್ದಾರೆ.

ಡಾ.ಶಿವಕುಮಾರ ಸ್ವಾಮೀಜಿಗಳ ಮೂರನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ದೇವನಹಳ್ಳಿ ನಗರದ ವಿಜಯಪುರ ರಸ್ತೆಯಲ್ಲಿರುವ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ, ಜಾತಿ-ಬೇಧ ಕಾಣದೆ, ಧರ್ಮಗಳ ಹಂಗಿಲ್ಲದೆ ಎಲ್ಲರಲ್ಲೂ ಒಂದಾಗಿದ್ದ, ಅನ್ನ-ಅಕ್ಷರ-ಆಶ್ರಯ ಎಂಬ ತ್ರಿವಿಧ ದಾಸೋಹ ಮೂಲಕ ಸಮಾಜವನ್ನು ಪೊರೆದ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಸರ್ಕಾರ ದಾಸೋಹ ದಿನವನ್ನಾಗಿ ಆಚರಿಸಲು ನಿರ್ಧರಿಸಿರುವುದು ಶ್ಲಾಘನೀಯ ಎಂದರು.

ದಾಸೋಹ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವಂತೆ ವಿಸ್ತರಿಸಿದ ಅವಿಸ್ಮರಣೀಯ ಸಾಧನೆ ಶ್ರೀಗಳದ್ದು. ಶ್ರೀಗಳು ಯುವ ಸನ್ಯಾಸತ್ವ ಸ್ವೀಕರಿಸಿದಾಗ ಆಗಷ್ಟೇ ವಿದೇಶೀಯರ ದಾಸ್ಯದಿಂದ ಮುಕ್ತವಾಗಿದ್ದ ದೇಶದಲ್ಲಿ ಹಸಿವು, ಅನಕ್ಷರತೆ ಹಾಗೂ ಅಸುರಕ್ಷತೆ ಸಮಸ್ಯೆಗಳು ಕಾಡುತ್ತಿದ್ದವು. ಸಮಾಜದ ನೋವಿಗೆ ಮಿಡಿದ ಶ್ರೀಗಳು, ಎದೆಗುಂದದೆ ದೀನ ದುರ್ಬಲರ, ರೈತಾಪಿ ವರ್ಗದ ಹಿತಕ್ಕಾಗಿ ಬದುಕನ್ನೇ ಅರ್ಪಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ಕೆ.ಎಸ್. ಪ್ರತಿಷ್ಠಾನದ ವಿಜಯಪುರ ನಗರ ಉಸ್ತುವಾರಿ ಪ್ರಕಾಶ್, ಮೋಹನ್, ಮಂಜುನಾಥ್, ಶ್ರೀ ಕಲ್ಪವೃಕ್ಷ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ನ ಖಜಾಂಚಿ ಅಮರಾವತಿ, ನಿರ್ದೇಶಕರಾದ ಆನಂದಮ್ಮ ಇದ್ದರು.

Related Articles

Leave a Reply

Your email address will not be published. Required fields are marked *

Back to top button