‘ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೇವನಹಳ್ಳಿ ಶಾಸಕರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ’

ದೇವನಹಳ್ಳಿ : ತಾಲ್ಲೂಕಿನ ಪ್ರತಿ ಗ್ರಾಮಗಳ ರಸ್ತೆ ಅಭಿವೃದ್ದಿಗೆ 50 ಲಕ್ಷ ಅನುಧಾನ ಮಂಜೂರು ಮಾಡಿಸಿಕೊಂಡು ಬರಲಾಗಿದೆ ಎಂದು ಕಾರ್ಯಕ್ರಮಗಳಲ್ಲಿ ಬೊಗಳೆ ಭಾಷಣ ಮಾಡಿ ಜನರಿಗೆ ಸುಳ್ಳು ಮಾಹಿತಿ ನೀಡಿ ಗ್ರಾಮಾಂತರ ಪ್ರದೇಶದಲ್ಲಿ ಅಮಾಯಕರನ್ನು ದಿಕ್ಕು ತಪ್ಪಿಸಿ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಮುನಿ ನರಸಿಂಹಯ್ಯ ಕಿಡಿಕಾರಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ ಬ್ಲಾಕ್ ಕಾಂಗ್ರೇಸ್ ಪಕ್ಷದಿಂದ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ದೇವನಹಳ್ಳಿ ತಾಲ್ಲೂಕು ತೈಲಗೆರೆ ಗ್ರಾಮದ ಸರ್ವೇ ನಂ 2 ರಲ್ಲಿ ಅನಧಿಕೃತವಾಗಿ ರಸ್ತೆಯಲ್ಲಿ ಮನೆ ಕಟ್ಟಿಕೊಂಡವರ ಪರವಾಗಿ ಕ್ಷೇತ್ರದ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಅವರು ರಾಜಕೀಯ ದುರುದ್ದೇಶದಿಂದ ಅಮಾಯಕರಿಗೆ ಮನೆ ಕಟ್ಟಿಕೊಳ್ಳುವಂತೆ ಹೇಳಿ ಅವರನ್ನು ಬಲಿಪಶು ಮಾಡುತಿದ್ದಾರೆಂದು ಆರೋಪಿಸಿದ್ದಾರೆ.
ಶಾಸಕರು ಗ್ರಾಮದಲ್ಲಿ ಉದ್ದೇಶ ಪೂರ್ವಕವಾಗಿ ಅಶಾಂತಿ ಹುಟ್ಟು ಹಾಕುವ ಕೆಲಸದಲ್ಲಿ ತೊಡಗಿದ್ದಾರೆ ಕ್ಷೇತ್ರದ ಜನ ಇವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿರುವುದು ಜನರ ಮಧ್ಯೆ ಗೊಂದಲ ಉಂಟು ಮಾಡುವುದಕ್ಕಲ್ಲ ಜನಪರವಾಗಿ ಕೆಲಸಮಾಡಲು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಜಗನ್ನಾಥ್, ದೇವನಹಳ್ಳಿ ಕಸಬಾ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಕಾರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಯರಾಮ್, ಕೆಂಪಣ್ಣ, ರಾಜಣ್ಣ, ಎಪಿಎಂಸಿ ನಿರ್ದೇಶಕ ಲಕ್ಷ್ಮೇಗೌಡ, ಕಾರಹಳ್ಳಿ ಮುಖಂಡರಾದ ಚಿಕ್ಕಣ್ಣ, ಜೊಸೇಪ್, ದಲಿತ ಯುವ ಮುಖಂಡ ಕೇಶವ ಮುಂತಾದವರು ಇದ್ದರು.




