ಬಾಗಲಕೋಟೆ ಜಿಲ್ಲೆಯಲ್ಲಿ ಚಿಕ್ಕ ಮಕ್ಕಳಿಗೆ ವೈರಲ್ ಸೋಂಕು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ವೈರಾಣು ಸೋಂಕಿಗೆ ಚಿಕ್ಕ ಮಕ್ಕಳು ಹೈರಾಣಾಗಿ ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ಏರಿಕೆಯಾಗಿದ್ದು ಕೋವಿಡ್ ಅಲ್ಲ ಎನ್ನುವದೇ ಸಮಾಧಾನದ ಸಂಗತಿ.
ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ 20ದಿನಗಳಲ್ಲಿ ಮನೆ ಮನೆಗೂ ವೈರಲ್ ಇನ್ಫೆಕ್ಷನ್ ವ್ಯಾಪಿಸುತ್ತಿದೆ. ಮಕ್ಕಳಲ್ಲಿ ಕಫ, ಉಸಿರಾಟ ತೊಂದರೆ ಹೆಚ್ಚಾಗುತ್ತಿದೆ. ಮಕ್ಕಳ ಸ್ಥಿತಿ ಕಂಡು ಪಾಲಕರಲ್ಲಿ ಆತಂಕ ಹೆಚ್ಚಾಗಿದೆ. ಮನೆಯಲ್ಲಿ ಒಬ್ಬರಿಗೆ ಸೋಂಕು ಕಾಣಿಸಿದರೆ ಸಾಕು ಮನೆಯವರಿಗೆಲ್ಲ ಸೋಂಕು ತಗುಲಿ ಹೈರಾಣಾಗುತ್ತಿದ್ದಾರೆ.
ಮಕ್ಕಳಲ್ಲಿ ಉಸಿರಾಟದ ತೊಂದರೆ ವಿಪರೀತವಾಗುತ್ತಿದೆ. ಬಾಗಲಕೋಟೆ ನಗರದ ಎಲ್ಲ ಆಸ್ಪತ್ರೆಗಳು ಸೇರಿ ಕಳೆದೊಂದು ವಾರದಿಂದ ಪ್ರತಿ ದಿನ ಅಂದಾಜು ಐದು ನೂರು ಮಕ್ಕಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಗಡಿ, ಕೆಮ್ಮು, ಜ್ವರದಿಂದ ಬಳಲುವ ಮಕ್ಕಳಿಗೆ ಔಷಧೋಪಚಾರದ ಬಳಿಕ ಮನೆಗೆ ಕಳುಹಿಸುತ್ತಿದ್ದಾರೆ. ಕಫ ಹಾಗೂ ಉಸಿರಾಟದ ತೊಂದ್ರೆ ಇರುವ ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತಿದೆ.
ವೈರಲ್ ಸೋಂಕು ಹೆಚ್ಚಿರುವ ಕಾರಣ ಆರೋಗ್ಯ ಇಲಾಖೆಯಿಂದ ಮನೆಮನೆಗೆ ಸರ್ವೆ ಕಾರ್ಯ ನಡೆದಿದ್ದು. ಬಾಗಲಕೋಟೆ ನಗರದಲ್ಲಿ ಪ್ರಾಯೋಗಿಕ ಸರ್ವೆ ಕಾರ್ಯದಲ್ಲಿ ಕುಮಾರೇಶ್ವರ ಆಸ್ಪತ್ರೆ ನೆರವಿನಿಂದ ಸರ್ವೆ ತಂಡ ನೇಮಕ ಮಾಡಲಾಗಿದೆ. ನಗರದಲ್ಲಿ 15 ತಂಡಗಳನ್ನ ರಚಿಸಲಾಗಿದೆ. ಪ್ರತಿ ತಂಡದಲ್ಲಿ ಓರ್ವ ವೈದ್ಯ, ಓರ್ವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯಿದ್ದು. ಒಂದು ವಾರ ಕಾಲ ಸರ್ವೆ ಕಾರ್ಯ ನಡೆಯಲಿದೆ. ವಾರದ ಬಳಿಕ ಎಷ್ಟು ಮಕ್ಕಳು ಬಳಲುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯಲಿದೆ ಎಂದು ಬಾಗಲಕೋಟೆ ಡಿಎಚ್ಓ ಡಾ.ಅನಂತ ದೇಸಾಯಿ ಮಾಹಿತಿ ನೀಡಿದ್ದಾರೆ.




