ಅನ್ಯ ಇಲಾಖಾಧಿಕಾರಿಗಳನ್ನು ತಹಶೀಲ್ದಾರ್ ಹುದ್ದೆಗೆ ನೇಮಿಸದಂತೆ ಆಗ್ರಹ

ಬಾಗಲಕೋಟೆ: ರಾಜ್ಯದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡದಿರುವಂತೆ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ.ಕ್ಯಾಪ್ಟನ್ ರಾಜೇಂದ್ರ ಸಾಹೇಬರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಜಿಲ್ಲಾ ಕಂದಾಯ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಇಲಾಖೆಯ ನೌಕರರ ಸಂಘದ ಗೌರವಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ತಾಲ್ಲೂಕು ಅಧ್ಯಕ್ಷರುಗಳು ಸೇರಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕರ್ನಾಟಕ ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದಂತೆ ಅನ್ಯ ಇಲಾಖಾಧಿಕಾರಿಗಳನ್ನು ತಹಶೀಲ್ದಾರ್ ಹುದ್ದೆಗೆ ನಿಯೋಜನೆ ಹಾಗೂ ನೇಮಕ ಮಾಡಬಾರದೆಂದು ಆಗ್ರಹಿಸಿದರು.
ಕಂದಾಯ ನೌಕರರ ಸಂಘದ ಗೌರವಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಗುಡೂರ ಮಾತನಾಡಿ ತಹಶೀಲ್ದಾರ ಹುದ್ದೆಯು ತಾಲೂಕಿನ ಮೆಜಿಸ್ಟ್ರೀಲ್ ಅಧಿಕಾರಿ ಹುದ್ದೆಯಾಗಿದ್ದು ಅತ್ಯಂತ ಜವಾಬ್ದಾರಿಯುತವಾಗಿರುತ್ತದೆ. ಖಾಲಿ ಇರುವ ಶೇ.50 ರಷ್ಟು ಹುದ್ದೆಗಳನ್ನು ನೇಮಕಾತಿ ಮೂಲಕ ಹಾಗೂ 50 ರಷ್ಟು ಹುದ್ದೆಗಳನ್ನು ಮುಂಬಡ್ತಿ ಮೂಲಕ ಕಂದಾಯ ನೌಕರರಿಗೆ ಮುಂಬಡ್ತಿಗೆ ಅನುಕೂಲವಾಗಲಿದೆ. ಬೇರೆ ಇಲಾಖಾಧಿಕಾರಿಗಳನ್ನು ನೇಮಕ ಮಾಡುವುದರಿಂದ ಸುಮಾರು 35 ರಿಂದ 40 ವರ್ಷ ಸೇವೆ ಸಲ್ಲಿಸಿದರೂ ಸಹ ಮುಂಬಡ್ತಿ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಬೇರೆ ಇಲಾಖೆಯಿಂದ ನಿಯೋಜನೆ ಮೇಲಿರುವ ತಹಶೀಲ್ದಾರರನ್ನು ಮಾತೃ ಇಲಾಖೆಗೆ ಬಿಡುಗಡೆ ಮಾಡಬೇಕು. ಹಾಗೂ ಇಲಾಖಾ ನೌಕರರಿಗೆ ಮುಂಬಡ್ತಿ ನೀಡುವ ಮೂಲಕ ತಹಶೀಲ್ದಾರ ಹುದ್ದೆಗೆ ನೇಮಕ ಮಾಡಬೇಕೆಂದು ತಿಳಿಸಿದರು.
ಅನ್ಯ ಇಲಾಖೆಯಿಂದ ತರಬೇತಿಗೆ ಬರುವವರನ್ನು ತಹಶೀಲ್ದಾರ್ ಹುದ್ದೆಗೆ ಮಾತ್ರ ನಿಯಮಿಸುತ್ತಿರುವುದು ದುರದೃಷ್ಟಕರ ಹಾಗೂ ನೋವಿನ ಸಂಗತಿಯಾಗಿದೆ. ಅನ್ಯ ಇಲಾಖಾ ನೌಕರರನ್ನು ತಹಶೀಲ್ದಾರ ಹುದ್ದೆಗೆ ನೇಮಕ ಮಾಡದಿರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.




