ಬಾಗಲಕೋಟೆಯಲ್ಲಿ ಮಳೆ; ಜನಜೀವನ ಅಸ್ತವ್ಯಸ್ತ

ಬಾಗಲಕೋಟೆ: ಬಾಗಲಕೋಟೆ ನಗರ, ವಿದ್ಯಾಗಿರಿಯಲ್ಲಿ ಬೆಳ್ಳಂಬೆಳಗ್ಗೆ ಮೋಡ ಕವಿದ ವಾತಾವರಣ, ಜೊತೆಗೆ ಅಲ್ಲಲ್ಲಿ ಮಳೆಯಾಗಿ ಜನಜೀವನ, ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಬಿಸಿಲಿನ ಝಳ ಹೆಚ್ಚಾಗಿತ್ತು. ಆದರೆ ಮಳೆ ಆಗಿರಲಿಲ್ಲ. ಮುಂಗಾರು ಬಿತ್ತನೆ ಮಾಡಿದ ರೈತರು ಮುಗಿಲು ನೋಡುವಂತಾಗಿತ್ತು. ಹೆಸರು,ತೊಗರಿ, ಗೋವಿನ ಜೋಳ ,ಸಜ್ಜೆ ಸೇರಿದಂತೆ ಮುಂಗಾರು ಬಿತ್ತನೆ ಮಾಡಿದ್ದ ರೈತರು ಮಳೆಗಾಗಿ ಆಕಾಶದತ್ತ ನೋಡುವಂತಾಗಿತ್ತು.
ನಿನ್ನೆ ಸಂಜೆಯಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಆಗುತ್ತಿದೆ. ಇವತ್ತು ಬೆಳಗ್ಗೆ ಬಾಗಲಕೋಟೆ ನಗರ,ವಿದ್ಯಾಗಿರಿ, ನವನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗಿರುವ ವರದಿಯಾಗಿದೆ. ಕಳೆದ ಎರಡು ವಾರದ ಹಿಂದೆ ಮಹಾರಾಷ್ಟ್ರ, ಬೆಳಗಾವಿಯಲ್ಲಿ ಮಳೆಯಾದ ಪರಿಣಾಮ ಜೊತೆಗೆ ಬಾಗಲಕೋಟೆ ಜಿಲ್ಲೆಯಲ್ಲೂ ರೋಹಿಣಿ ಮಳೆ ಆರ್ಭಟದಿಂದ ಕೃಷ್ಣಾ, ಘಟಪ್ರಭಾ ನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಿತ್ತು.
ರೋಹಿಣಿ ಮಳೆಗೆ ಮುಂಗಾರು ಬಿತ್ತನೆ ರೈತರು ಮಾಡಿದ್ದರು. ವಾಡಿಕೆಗಿಂತ ಹೆಚ್ಚು ಮಳೆ ಆಗಿತ್ತು. ರೈತರು ಕೂಡಾ ಬಿತ್ತನೆ ಕಾರ್ಯ ಮಾಡಿ, ಇದೀಗ ಮಳೆ ಯಾವಾಗ ಆಗುತ್ತೋ ಎಂದು ಆಕಾಶದತ್ತ ನೋಡುತ್ತಿದ್ದರು. ಈಗ ಮತ್ತೆ ಮಳೆ ಕೃಪೆಯಾಗಿದೆ.




