ಬಾಗಲಕೋಟೆ: ನಿವೃತ್ತ ಸೈನಿಕನಿಗೆ ಸಿಗದ ಪಿಂಚಣಿ; ಕಂಗೆಟ್ಟ ಹಿರಿಯ ಜೀವಗಳು!

ಬಾಗಲಕೋಟೆ: ದೇಶದ ಗಡಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಹಿರಿಯ ಜೀವಕ್ಕೆ ಪಿಂಚಣಿ ಸೌಲಭ್ಯ ಸಿಗದೇ ಮಾಜಿ ಸೈನಿಕ ದಂಪತಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ ನಗರದಲ್ಲಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಈರಪ್ಪ ಕಾಳಪ್ಪ ಬಡಿಗೇರ ಅವರ ಕರುಣಾಜನಕ ಸ್ಥಿತಿಯಲ್ಲಿದ್ದಾರೆ.ಈರಪ್ಪ ಅವರು ಒಬ್ಬ ಮಾಜಿ ಸೈನಿಕ. 60ರ ದಶಕದಲ್ಲಿ ದೇಶಸೇವೆಗಾಗಿ ಸೇನೆ ಸೇರಿದ್ದರು. ಒಂದೂವರೆ ದಶಕ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಅವರಿಗೆ ನಿವೃತ್ತಿ ಬಳಿಕ ದೊರೆಯಬೇಕಾದ ಯಾವ ಸೌಲಭ್ಯವೂ ಸಿಕ್ಕಿಲ್ಲ. ಅದಕ್ಕೆ ಸೇವೆ ಸಲ್ಲಿಸಿದ ದಾಖಲಾತಿಯಲ್ಲಿ 15 ವರ್ಷದ ಬದಲಿಗೆ 8 ವರ್ಷ ಎಂದು ನಮೂದಿಸಿದ್ದಕ್ಕಾಗಿ ಅವರಿಗೆ ಪಿಂಚಣಿ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಸಿಕ್ಕಿಲ್ಲ ಎನ್ನುತ್ತಿದ್ದಾರೆ. 84ರ ವಯಸ್ಸಿನಲ್ಲಿರುವ ಈರಪ್ಪ ಹಾಗೂ ಅವರ ಪತ್ನಿ ಜೀವನ ನಡೆಸಲು ಪರದಾಡುತ್ತಿದ್ದಾರೆ.
ಯಾವುದೇ ಆದಾಯ ಇಲ್ಲ, ದೇಶ ಕಾಯ್ದ ಯೋಧನ ನೆತ್ತಿಗೊಂದು ಸೂರು ಸಿಕ್ಕಿಲ್ಲ. ಅಲೆದಾಡಿದ ಆಫೀಸುಗಳಿಗೆ ಲೆಕ್ಕವಿಲ್ಲ, ಮನವಿ ಮಾಡಿದ ಅಧಿಕಾರಿಗಳಿಂದಲೂ ನನಗೆ ನೆರವು ಸಿಗಲಿಲ್ಲ. ಈಗ ವಯಸ್ಸಾಗಿದೆ. ಕೆಲಸ ಮಾಡಲು ಶಕ್ತಿ ಇಲ್ಲ. ವೃದ್ದಾಪ್ಯ ವೇತನ ಮನೆ ಬಾಡಿಗೆ, ವಿದ್ಯುತ್ ಬಿಲ್ ಗೆ ಸಮನಾಗುತ್ತಿದೆ. ಜೀವನ ನಡೆಸೋದು ಬಹಳ ದುಸ್ತರವಾಗಿದೆ ಎನ್ನುತ್ತಿದ್ದಾರೆ. ನಿವೃತ್ತ ಯೋಧ ನಮಗೆ ಆಶ್ರಯ ಮನೆ ನೀಡಿ ಎಂದು ನಿವೃತ್ತ ಸೈನಿಕ ಈರಪ್ಪ ಬಡಿಗೇರ ಮನವಿ ಮಾಡುತ್ತಿದ್ದಾರೆ.
ಇನ್ನು ಈರಪ್ಪ ಬಡಿಗೇರ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅರಟಾಳ ಗ್ರಾಮದವರು.ಭಾರತೀಯ ಸೇನೆಯಲ್ಲಿ 115 ಮರಾಠಾ ಪೈಟ್ ಇನ್ ಪೆಂಟ್ರಿ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸಿ ಸೇನೆಯಿಂದ ನಿವೃತ್ತರಾಗಿದ್ದಾರೆ. ಆ ವೇಳೆ ಗ್ರಾಚ್ಯುವಿಟಿ ಮಾತ್ರ ನೀಡುತ್ತಿದ್ದರು ಆ ಪ್ರಕಾರ ಹತ್ತು ಸಾವಿರ ನೀಡಿದ್ದಾರಂತೆ. ನಂತರ ಕೆಲ ದಾಖಲಾತಿ ನೀಡಿದರೆ ಪೆನ್ಶನ್ ಬರುವ ವ್ಯವಸ್ಥೆ ಇತ್ತು. ಆದರೆ ದಾಖಲಾತಿ ಸಮಸ್ಯೆ ಕಾರಣ ಇವರಿಗೆ ಪೆನ್ಶನ್ ಬರುತ್ತಿಲ್ಲವಂತೆ. ಕಳೆದ ಮೂರು ದಶಕಗಳಿಂದ ಬನಹಟ್ಟಿಯಲ್ಲಿರುವ ಇವರು ನಿವೃತ್ತಿ ಬಳಿಕ ಕೆಎಸ್ ಆರ್ ಟಿಸಿ, ಬ್ಯಾಂಕ್ ನಲ್ಲಿ ಕೆಲಸಕ್ಕೆ ಹೋದರೂ ಕೆಲಸ ಖಾಯಂ ಆಗಲಿಲ್ಲ. ಇಬ್ಬರು ಮಕ್ಕಳಿದ್ದು, ಮಗಳು ಮದುವೆ ಆಗಿ, ಗಂಡನ ಮನೆಗೆ ಹೋಗಿದ್ದರೆ. ಮಗನಿದ್ದು ಇವರತ್ತ ನೋಡುತ್ತಿಲ್ಲ.




