ಬಾಗಲಕೋಟೆ

ಮಹಾರಾಷ್ಟ್ರ ಮಾರುಕಟ್ಟೆಗೆ ರಫ್ತಾಗುತ್ತಿಲ್ಲ ಸೀರೆ; ಬಾಗಲಕೋಟೆ ನೇಕಾರರ ಮೇಲೆ ಲಾಕ್​ಡೌನ್ ಎಫೆಕ್ಟ್

ವರದಿ : ರಾಚಪ್ಪ ಬನ್ನಿದಿನ್ನಿ

ಬಾಗಲಕೋಟೆ: ರಾಜ್ಯದಲ್ಲಿ ಕೋವಿಡ್ ಲಾಕ್ ಡೌನ್ ಬಹುತೇಕ ಸಡಿಲಿಕೆ ಆಗಿದೆ.ಸ್ವಲ್ಪ ವ್ಯಾಪಾರ ವಹಿವಾಟು ಚೇತರಿಕೆಗೊಳ್ಳುತ್ತಿದೆ.ಆದರೆ ಬಾಗಲಕೋಟೆ ನೇಕಾರರಿಗೆ ಮಾತ್ರ ಇನ್ನೂ ಸಂಕಷ್ಟ ತಪ್ಪಿಲ್ಲ. ಮಹಾರಾಷ್ಟ್ರದಲ್ಲಿ ಕೋವಿಡ್ ಲಾಕ್ ಡೌನ್ ಕಠಿಣ ನಿಯಮದಿಂದಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಸೀರೆ ರಫ್ತಾಗದೇ ಸೀರೆ ಮನೆಯಲ್ಲೇ ಉಳಿಯುತ್ತಿವೆ.

ಬಾಗಲಕೋಟೆಯ ಹವೇಲಿ ಗ್ರಾಮದಲ್ಲಿ ಬಹುತೇಕ ಕುಟುಂಬಗಳು ನೇಕಾರರಿಕೆ ಅವಲಂಬಿಸಿವೆ.ರಾಜ್ಯ ಸರ್ಕಾರ ಕೇವಲ 3ಸಾವಿರ ನೇಕಾರರಿಗೆ ಕೋವಿಡ್ ಪರಿಹಾರ ಘೋಷಿಸಿದೆ.ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧಿಕಾರಕ್ಕೆ ಬರುವ ವೇಳೆ ರೈತರು,ನೇಕಾರರ ನನ್ನ ಎರಡು ಕಣ್ಣುಗಳಿದ್ದಂತೆ ಎಂದಿದ್ದರು. ಆದರೀಗ ಬಿ ಎಸ್ ಯಡಿಯೂರಪ್ಪ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ತಾರತಮ್ಯ ಮಾಡುತ್ತಿದ್ದಾರೆ.

ಕಳೆದ ಎರಡು ಲಾಕ್ ಡೌನ್ ಗಳಿಂದ ನೇಕಾರರ ಕುಟುಂಬಗಳ ತೀವ್ರ ಸಂಕಷ್ಟ ಸಿಲುಕಿವೆ. ಇನ್ನು ಲಾಕ್ ಡೌನ್ ಓಪನ್ ಆದ್ರೂ ಸೂಕ್ತ ಮಾರುಕಟ್ಟೆ ಸಿಗದ ಕಾರಣ ನೇಯ್ದಿಟ್ಟ ಬಟ್ಟೆಗಳು ಮನೆಯಲ್ಲಿಯೇ ಇಟ್ಟುಕೊಂಡು ಕೂರು ಪರಿಸ್ಥಿತಿ ಬಡ ನೇಕಾರರದ್ದಾಗಿದೆ. ಇತ್ತ ಮಾರುಕಟ್ಟೆ ಇಲ್ಲದೇ ಯಾವುದೇ ಆರ್ಡರ್ ಗಳು ನಮಗೆ ಸಿಗುತ್ತಿಲ್ಲ. ಅಲ್ಲದೇ ಈಗಾಗಲೇ ನೇಯ್ದಿಟ್ಟ ಬಟ್ಟೆಗಳು ಹಾಗೆಯೇ ಮನೆಯಲ್ಲಿಯೇ ಉಳಿದಿವೆ. ಸರ್ಕಾರ ಏನೋ ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ಆದ್ರೆ ಸರ್ಕಾರದ ಪರಿಹಾರ ಕುಟುಂಬಗಳ ನಿರ್ವಹಣೆಗೆ ಸಾಧ್ಯವಾಗಲ್ಲ ಎನ್ನುತ್ತಿದ್ದಾರೆ ಬಡ ನೇಕಾರರು.

ಸಾಮಾನ್ಯವಾಗಿ ಒಂದು ಸೀರೆ ರೆಡಿಯಾಗಿ ಬರಬೇಕಂದ್ರೆ ಕನಿಷ್ಠ 6ಗಂಟೆ ಸಮಯ ಹಿಡಿಯುತ್ತದೆ. ಹಾಗಿದ್ರೂ ಓರ್ವ ನೇಕಾರ ಮಾರ್ಕೆಟ್ ಓಪನ್‌ ಇದ್ದಾಗ ದಿನವೊಂದಕ್ಕೆ 4 ಸೀರೆಗಳನ್ನು ನೇಯುತ್ತಿದ್ದರು.‌ ಒಂದು ಕುಟುಂಬದಲ್ಲಿ ಮೂರದಿಂದ ನಾಲ್ಕು ಜನ ಒಂದು ದಿನಕ್ಕೆ 16 ಸೀರೆಗಳನ್ನು ನೇಯ್ದು ಅಂದೇ ಅವುಗಳನ್ನು ಮಾರುಕಟ್ಟೆಗೆ ರವಾನೆ ಮಾಡುತ್ತಿದ್ದರು. ಹೀಗೆ ನೇಯ್ದ ಪ್ರತಿ ಸೀರೆಗೆ ರೂ 138 ನೇಕಾರನಿಗೆ ಸಿಗುತ್ತಿತ್ತು. ಹೀಗಾಗಿ ನೇಕಾರರ ಜೀವನ ಸುಖಮಯವಾಗಿತ್ತು. ಆದ್ರೆ ಮಹಾರಾಷ್ಟ್ರ ಮಾರುಕಟ್ಟೆ ಪ್ರಾರಂಭವಿಲ್ಲದೆ ಇರುವುದರಿಂದ ಖರೀದಿದಾರರು ಸೀರೆ ಕೊಂಡೊಯ್ಯುತ್ತಿಲ್ಲ. ದಿನಕ್ಕೆ ನಾಲ್ಕು ಸೀರೆ ನೇಯುತ್ತಿದ್ದವರು ಈಗ 1ಸೀರೆ ನೇಯುವಂತಾಗಿದೆ. ಸರ್ಕಾರ ನೇಕಾರರಿಗೆ ಕನಿಷ್ಠ 10ಸಾವಿರ ಕೋವಿಡ್ ಪರಿಹಾರ ಪ್ಯಾಕೇಜ್ ಕೊಡಬೇಕು, ಬಾಗಲಕೋಟೆ ಹವೇಲಿ ನೇಕಾರರಿಗೆ ಕಾರ್ಡ್ ಕೊಟ್ಟಿಲ್ಲ.ಜೊತೆಗೆ ಸೂಕ್ತವಾಗಿ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ ಹೀಗಾಗಿ ಜವಳಿ ಇಲಾಖೆಗೆ ಅಲೆಯುವಂತಾಗಿದೆ ಎಂದು ನೇಕಾರ ವೀರುಪಾಕ್ಷಿ ಬೇನಾಳ ಅಳಲು ತೋಡಿಕೊಂಡರು.

ಕೋವಿಡ್ ಲಾಕ್ ಡೌನ್ ಸಡಿಲಿಕೆಯಾದರೂ ನೇಕಾರ ಕುಟುಂಬಗಳಿಗೆ ಸಂಕಷ್ಟಕ್ಕೆ ಸಿಲುಕಿವೆ.ಇದೀಗ ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಉಲ್ಬಣಗೊಳ್ಳುತ್ತಿದೆ.ಬಾಗಲಕೋಟೆ ನೇಕಾರ ಸಂಕಷ್ಟ ಯಾವಾಗ ಪರಿಹಾರವಾಗತ್ತೆ ಎನ್ನುವಂತಾಗಿದೆ

Related Articles

Leave a Reply

Your email address will not be published. Required fields are marked *

Back to top button