ಬಾಗಲಕೋಟೆ: ಕೆಂದೂರು ಕೆರೆ ಹೂಳೆತ್ತುವ ಕಾರ್ಯ ಅವೈಜ್ಞಾನಿಕ; ಪಕ್ಷಿಧಾಮವನ್ನಾಗಿಸಲು ಆಗ್ರಹ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ದೊಡ್ಡ ಕೆರೆ ಎಂದರೆ ಬಾದಾಮಿ ತಾಲೂಕಿನ ಕೆಂದೂರು ಕೆರೆ. ಕೆಂದೂರು ಕೆರೆ ಅಭಿವೃದ್ಧಿಪಡಿಸಿ ಪಕ್ಷಿಧಾಮವವನ್ನಾಗಿಸಿ ಎಂದು ಪಕ್ಷಿ, ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಜಿಲ್ಲೆಯ ಬಾದಾಮಿ ತಾಲೂಕಿನ ಕೆಂದೂರು ಕೆರೆ 182ಹೆಕ್ಟೇರ್ ಪ್ರದೇಶ ವಿಸ್ತೀರ್ಣ ಹೊಂದಿದ ಬೃಹತ್ ಕೆರೆ. ಈ ಕೆರೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತಲಾಗುತ್ತಿದೆ. ಇದು ಅವೈಜ್ಞಾನಿಕವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಕೆಂದೂರು ಕೆರೆ ಐತಿಹಾಸಿಕ ಬಾದಾಮಿಯಿಂದ ಪಟ್ಟದಕಲ್ಲು, ಧಾರ್ಮಿಕ ಕ್ಷೇತ್ರ ಮಹಾಕೂಟ ಮಾರ್ಗ ಮಧ್ಯೆ ಬರುತ್ತದೆ. ಬೃಹತ್ ಕೆಂದೂರು ಕೆರೆ ಅಭಿವೃದ್ಧಿ ಪಡಿಸಿ ಪಕ್ಷಿ ಧಾಮ,ಪ್ರವಾಸಿ ತಾಣವನ್ನಾಗಿಸಿದರೆ ಬಾದಾಮಿ ತಾಲೂಕಿಗೆ ಮತ್ತಷ್ಟು ಮೆರುಗು ಬರಲಿದೆ. ಇನ್ನು ಕೆಂದೂರು ಕೆರೆಯಲ್ಲಿ ಹಿಂದೆ ತುಂಬಿದ್ದಾಗ ಮೀನುಗಾರಿಕೆ ನಡೆದು ಈ ಭಾಗದ ಮೀನುಗಾರರಿಗೆ ಅನುಕೂಲ ಆಗಿತ್ತು. ಜೊತೆಗೆ ಕೆಂದೂರು ಕೆರೆ ತುಂಬಿ 8ಗ್ರಾಮಗಳ ಸುತ್ತಲೂ ರೈತರ ಜಮೀನುಗಳಲ್ಲಿ ಬೋರ್ವೆಲ್ ಅಂತರ್ಜಲ ಹೆಚ್ಚಾಗಿ ರೈತರಿಗೆ ಅನುಕೂಲ ಆಗಿತ್ತು. ಹೀಗಾಗಿ ಈಗ ಕೆರೆಯಲ್ಲಿ ಹೂಳೆತ್ತಿ ನೀರು ತುಂಬಿಸುವ ಯೋಜನೆ ಸಾಕಾರವಾದರೆ ರೈತರಿಗೆ ವರದಾನವಾಗಲಿದೆ. ಲಕ್ಷ, ಕೋಟಿ ಖರ್ಚು ಮಾಡಿದರೂ ಕೆಂದೂರು ಕೆರೆ ಮಾತ್ರ ಅಭಿವೃದ್ಧಿ ಆಗುತ್ತಿಲ್ಲ. ಶಾಸಕ ಸಿದ್ಧರಾಮಯ್ಯ ಮನಸ್ಸು ತೋರಿ,ಕೆಂದೂರು ಕೆರೆ ಅಭಿವೃದ್ಧಿ, ಪಕ್ಷಿಧಾಮವನ್ನಾಗಿಸಲು ಕ್ರಮಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿ ಎಸ್ ಎಚ್ ವಾಸನ ಆಗ್ರಹಿಸಿದ್ದಾರೆ.




