ಕೋವಿಡ್ ಕರಿನೆರಳಲ್ಲಿ ರೈತರ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ

ಬಾಗಲಕೋಟೆ: ರೈತರ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ ಕೊರೊನಾ ಕರಿ ನೆರಳಿನಲ್ಲಿಂದು ಆಚರಿಸಲಾಗುತ್ತಿದ್ದು, ಅಮಾವಾಸ್ಯೆಯ ಪೂಜೆಗಾಗಿ ಬಾಗಲಕೋಟೆ ಮಾರುಕಟ್ಟೆಯಲ್ಲಿ ಕಲರ್ ಫುಲ್ ಮಣ್ಣೆತ್ತುಗಳು ಖರೀದಿ ನಡೆಯುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮ ಇಲ್ಲ. ಇದೀಗ ಕೋವಿಡ್ ಎರಡನೇ ಅಲೆ ತಗ್ಗಿದೆ. ಮೂರನೇ ಅಲೆಯ ಭೀತಿಯಿದೆ.ಈ ಮಧ್ಯೆ ಮತ್ತೆ ಮಣ್ಣೆತ್ತಿನ ಅಮಾವಾಸ್ಯೆ ಬಂದಿದೆ. ಮಣ್ಣೆತ್ತು ಖರೀದಿ ಭರಾಟೆ ಕಡಿಮೆಯಿದೆ. ಪ್ರತಿ ವರ್ಷ ಮಣ್ಣೆತ್ತುಗಳು ಮಾರಾಟ ಜೋರಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕಡಿಮೆ ಮಾರಾಟ ಆಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಕಲರ್ ಫುಲ್ ಮಣ್ಣೆತ್ತುಗಳು ಮಾರಾಟವಾಗುತ್ತಿವೆ.
ಕಲರ್ ಮಣ್ಣೆತ್ತು ಜೋಡಿಗೆ 80 ರಿಂದ 100 ರೂಪಾಯಿಗೆ ಮಾರಾಟವಾಗುತ್ತಿವೆ, ಸಾದಾ ಮಣ್ಣೆತ್ತಿಗೆ ರೂ 40 ರೂಪಾಯಿ ಜೋಡಿ ಮಾರಾಟಕ್ಕಿವೆ. ಹುತ್ತಿನ ಮಣ್ಣು, ಹಾಗೂ ಎರೆ ಮಣ್ಣು ಜೊತೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ್ದ ಮಣ್ಣೆತ್ತು ಮಾರಾಟವಾಗುತ್ತಿವೆ. ಕುಂಬಾರ ಕುಟುಂಬದವರು ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಣ್ಣೆತ್ತು ತಯಾರಿಸಿಕೊಂಡು ವ್ಯಾಪಾರ ಮಾಡುತ್ತಾರೆ.
ಉತ್ತರ ಕರ್ನಾಟಕದಲ್ಲಿ ಪ್ರತಿ ಹಬ್ಬದಲ್ಲೂ ಒಂದೊಂದು ವಿಶೇಷತೆ ಇರುತ್ತೆ. ಅದೇ ರೀತಿಯಾಗಿ ಮಣ್ಣೆತ್ತಿನ ಅಮಾವಾಸ್ಯೆಗೂ ವಿಶೇಷತೆಯಿದೆ.ಮಣ್ಣೆತ್ತು ಪೂಜೆ ಮಾಡುವ ಮೂಲಕ ರೈತರು ಭೂತಾಯಿಗೆ ಪೂಜೆ ಮಾಡುತ್ತೇವೆ ಎನ್ನುತ್ತಾರೆ ರೈತ ಶಂಕ್ರಪ್ಪ ಭೂಸನ್ನವರ.
ಒಟ್ಟಿನಲ್ಲಿ ರೈತರು ಮನೆಯಲ್ಲಿ ಮಣ್ಣೆತ್ತಿಗೆ ಬಗೆ ಬಗೆಯ ನೈವೇದ್ಯ ಮಾಡಿ, ಪೂಜಿಸುತ್ತಿದ್ದಾರೆ.




