ಅಪ್ಪು ಮಾಸದ ನೆನಪು: ಸರ್ಕಲ್ಗೆ ನಟ ಪುನೀತ್ ರಾಜಕುಮಾರ್ ಹೆಸರು

ರಾಮನಗರ: ಅದೊಂದು ಬಡ ಕೂಲಿ ಕಾರ್ಮಿಕರೇ ತುಂಬಿರುವ ಕುಗ್ರಾಮ. ಆದ್ರೆ ಅಲ್ಲಿನ ಜನತೆಯ ಅಭಿಮಾನದಲ್ಲಿ ಮಾತ್ರ ಇನ್ನಿಲ್ಲದ ಶ್ರೀಮಂತಿಕೆ ಎದ್ದು ಕಾಣುತ್ತಿತ್ತು. ಅದು ಇಂದು ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.
ಹೌದು, ಅಯ್ಯೋ ಕೋಲಿನಾಲಿ ಮಾಡಿ ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುವುದರ ಜೊತೆಗೆ ಒಂದಿಷ್ಟು ಹಣ ಉಳಿಸಿಕೊಳ್ಳೋಣ ಎನ್ನುವ ಭಾವನೆಯೇ ಹೆಚ್ಚಿನ ಜನರಲ್ಲಿ ಕಾಣುತ್ತದೆ. ಆದ್ರೆ ಈ ಗ್ರಾಮದ ಯುವಕರಲ್ಲಿ ಮಾತ್ರ ಅದು ಮರೆಯಾಗಿ, ನಾಡು-ನುಡಿ, ನೆಚ್ಚಿನ ನಟನ ಅಭಿಮಾನಕ್ಕೆ ತಮ್ಮ ತನು-ಮನವನ್ನು ಧಾರೆ ಎರೆದ್ರು. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮದ ಅಂಬಾಡಹಳ್ಳಿಯಲ್ಲಿ ಪುನೀತ್ ಅಭಿಮಾನಿ ಬಳಗ ಮತ್ತು ಗ್ರಾಮಸ್ಥರು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪುನೀತ್ ಸ್ಮರಣೆ ಕಾರ್ಯಕ್ರಮದಲ್ಲಿ ಇದು ಕಂಡು ಬಂತು.
ಇಂದು ಬೆಳೆಗ್ಗಿನಿಂದಲೇ ಗ್ರಾಮದ ಹೊರ ಬಾಗಿಲನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಆರಂಭದಲ್ಲಿ ಬೆಳ್ಳಿ ರಥದಲ್ಲಿ ಅಗಲಿದ ನಟ ಪುನೀತರಾಜಕುಮಾರ್ ಭಾವಚಿತ್ರವನ್ನಿಟ್ಟು, ಡೊಳ್ಳುಕುಣಿದೊಂದಿಗೆ ಗ್ರಾಮದ ಬೀದಿಬೀದಿಗಳಲ್ಲಿ ಮೆರವಣಿಗೆ ನಡೆಸಿದ್ರು. ಇದಕ್ಕೆ ಆಟೋ ಚಾಲಕರು ಸಾಥ್ ನೀಡಿದ್ರು. ನಂತರ ಗ್ರಾಮದ ವೃತಕ್ಕೆ ಪುನೀತ್ ರಾಜಕುಮಾರ್ ವೃತ್ತವೆಂದು ನಾಮಕರಣ ಮಾಡಿ, ನಾಮಫಲಕ ಅಳವಡಿಸಿ, ಕನ್ನಡ ಧ್ವಜರೋಹಣ ಮಾಡಿ, ರಾಜ್ಯೋತ್ಸವ ಆಚರಿಸಿ, ಪುನೀತ್ ಸವಿನೆನೆಪಿಗಾಗಿ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಮಾಡಿ ಜನ ಮೆಚ್ಚುಗೆಗೆ ಪಾತ್ರರಾದರು. ಆದರೇ ಈ ಕಾರ್ಯಕ್ರಮಕ್ಕೆ ಯಾವುದೇ ರಾಜಕಾರಣಿಗಳು ಮತ್ತು ಗಣ್ಯರನ್ನು ಕರೆಯದೇ ಸ್ವತಃ ತಾವೇ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಅಕ್ಕಪಕ್ಕದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದ್ರು.
ಗ್ರಾ.ಪಂ. ಸದಸ್ಯರಾದ ತಿಮ್ಮೇಗೌಡ, ಪುಟ್ಟಸ್ವಾಮಿ, ಬಸಮ್ಮಣ್ಣಿ, ಮುಖಂಡರಾದ ಶಿವಮುತ್ತು, ರಘುಮಾದೇಗೌಡ, ಪ್ರವೀಣ, ವೆಂಕಟರಾಮು, ಶ್ರೀನಿವಾಸ್, ಕಾಳಯ್ಯ, ಚಲುವರಾಜು, ಸ್ವಾಮಿ, ವೆಂಕಟರಾಮು ದಿನೇಶ್ ಮುಂತಾದವರಿದ್ದರು.




