ಚಿಕ್ಕಮಗಳೂರುಜಿಲ್ಲಾ ಸುದ್ದಿ

ಕಾಫಿನಾಡಿನಲ್ಲಿ ಅತಿಯಾದ ಮಂಗನ ಹಾವಳಿ; ರೈತರಿಗಿಲ್ಲ ನೆಮ್ಮದಿ

ಕಿರುಗುಂದ ರಫೀಕ್

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡುಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಘರ್ಷ ಜೋರಾಗಿದೆ. ಅದರಲ್ಲೂ ಮಂಗಗಳು ಎಲ್ಲಂದರಲ್ಲಿ ಯಾವುದೇ ಭಯವಿಲ್ಲದೆ ಜಿಗಿದಾಟ ಆರಂಭಿಸಿದ್ದು, ಇವುಗಳನ್ನು ನಿಯಂತ್ರಿಸುವುದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹಿಂದೆಯೆಲ್ಲಾ ಮಂಗಗಳು ಕಾಡಿನ ಪ್ರದೇಶದಲ್ಲೇ ಇರುತ್ತಿದ್ದವು. ಕೆಲವೊಮ್ಮೆ ಕಾಡಿನ ಅಂಚಿನ ತೋಟಗಳಿಗಷ್ಟೇ ಲಗ್ಗೆಯಿಟ್ಟು ಕಾಡಿಗೆ ಮರಳುತ್ತಿದ್ದವು. ರೈತರು ಪಟಾಕಿ ಸಿಡಿಸಿದಾಗ ಕಾಡಿಗೆ ಓಡುತ್ತಿದ್ದವು. ಆದರೆ ಈಗ ಇವುಗಳಿಗೆ ಕಾಡು ಮತ್ತು ನಾಡು ಎಂಬ ವ್ಯತ್ಯಾಸವಿಲ್ಲದೆ ಜನವಸತಿ ಪ್ರದೇಶಗಳಲ್ಲೇ ಹೆಚ್ಚಾಗಿ ಕಾಣಿಸತೊಡಗಿವೆ. ನಿರಂತರವಾಗಿ ಬೆಳೆಗಳನ್ನು ನಾಶಪಡಿಸುತ್ತಿರುವ ಇವುಗಳ ದಾಂಧಲೆಗೆ ರೈತರು ಹೈರಾಣಾಗಿದ್ದಾರೆ. ಕಾಫಿ ತೋಟಗಳಲ್ಲಿ ಗುಂಪಾಗಿ ಓಡಾಡುವ ಮಂಗಗಳು ಅರೇಬಿಕ ಹಣ್ಣುಗಳನ್ನು ತಿನ್ನತೊಡಗಿವೆ. ಜತೆಗೆ ಕಿತ್ತಳೆ, ಬಾಳೆ, ಮತ್ತಿತರೆ ಬೆಳೆಗಳನ್ನು ನಾಶಪಡಿಸುತ್ತಿವೆ.

ಮಲೆನಾಡಿನ ಕೆಲವೆಡೆ ಇರುವ ತೆಂಗಿನ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. ತೆಂಗಿನ ಮರದ ತುದಿಗೆ ಹೋಗಿ ಎಳೆನೀರನ್ನು ಕಿತ್ತುಕೊಂಡು ಕುಡಿಯುತ್ತವೆ. ಮನೆಗಳಿಗೂ ನುಗ್ಗಿ ವಸ್ತುಗಳನ್ನೆಲ್ಲಾ ಚಲ್ಲಾಪಿಲ್ಲಿ ಮಾಡಿ ಆಹಾರ ಪದಾರ್ಥ, ಹಣ್ಣು ಹಂಪಲು, ಅಂಗಡಿಯಲ್ಲಿ ಮಾರಾಟಕ್ಕಿಟ್ಟ ತಿನಿಸುಗಳನ್ನು ಕೊಂಡೊಯ್ಯುತ್ತವೆ. ಮನೆ ಹಿತ್ತಲಲ್ಲಿ ಬೆಳೆದ ಕೈತೋಟದ ತರಕಾರಿ, ಹಣ್ಣುಗಳೂ ಮಂಗಮಾಯವಾಗುತ್ತಿವೆ.

ದಟ್ಟ ಕಾಡಿನ ಪ್ರದೇಶ ಕಡಿಮೆಯಾಗಿ, ಎಲ್ಲೆಡೆ ಹೋಂ ಸ್ಟೇ, ರೆಸಾರ್ಟ್ ತಲೆಯೆತ್ತಿರುವ ಪರಿಣಾಮ ಮಂಗಗಳು ನಾಡಿಗೆ ಲಗ್ಗೆಯಿಡುಡುತ್ತಿವೆ. ಹಲಸು, ಮಾವು ಹಣ್ಣಾಗುವ ಕೆಲ ತಿಂಗಳ ಕಾಲ ಮಂಗಗಳಿಗೆ ಆಹಾರದ ಕೊರತೆ ಎದುರಾಗುವುದಿಲ್ಲ. ನಂತರದ ದಿನಗಳಲ್ಲಿ ಆಹಾರಕ್ಕಾಗಿ ಅಲೆಯುತ್ತಾ ಸಾಗುತ್ತವೆ.

ಇವುಗಳಿಂದ ನಾಶವಾಗುವ ಬೆಳೆಗಳನ್ನು ರೈತರು ಉಳಿಸಿಕೊಳ್ಳಲು ಏನೇ ಕಸರತ್ತು ನಡೆಸಿದರೂ ಅದು ಸಾಧ್ಯವಾಗುತ್ತಿಲ್ಲ. ಪಟಾಕಿ ಸಿಡಿಸಿದರೂ ಪ್ರಯೋಜನವಿಲ್ಲ. ಮಂಗವನ್ನು ಹುಲಿ ತಿನ್ನುವ ಚಿತ್ರವಿರುವ ಬ್ಯಾನರ್ ತಮ್ಮ ಜಮೀನಿನಲ್ಲಿ ಅಳವಡಿಸಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ಮತ್ತು ಸರ್ಕಾರ ಈ ಮಂಗನ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಲು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

ಸಾರ್ವಜನಿಕ ಪ್ರದೇಶಗಳಲ್ಲಿ ಮಂಗಗಳು ಕಾಣಿಸಿಕೊಂಡರೆ ಅರಣ್ಯ ಸಿಬ್ಬಂದಿಗಳು ಹಿಡಿದು ಸ್ಥಳಾಂತರಿಸುತ್ತಾರೆ. ಮಂಗನ ಕಾಟ ಹೆಚ್ಚಾಗಿದ್ದರೆ, ಅವುಗಳನ್ನು ಹಿಡಿದು ಕಾಡಿಗೆ ಸ್ಥಳಾಂತರಿಸಲು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಜವಾಬ್ದಾರಿಯಿದ್ದು, ಈ ಕಾರ್ಯಾಚರಣೆಗೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಲಾಗುವುದು
-ಕ್ರಾಂತಿ ಡಿಎಫ್ಒ, ಚಿಕ್ಕಮಗಳೂರು

Spread the love

Related Articles

Leave a Reply

Your email address will not be published. Required fields are marked *

Back to top button