ರಾಮನಗರ ಜಿಲ್ಲೆಯಲ್ಲಿ ಅಕ್ರಮ ನಡೆಸುವವರ ವಿರುದ್ಧ ಕ್ರಮ

ರಾಮನಗರ: ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಜೂಜು ಇತ್ಯಾದಿ ಅಕ್ರಮಗಳಿಗೆ ಕಡಿವಾಣ ಹಾಕುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸಲಾಗುವುದು. ಒಟ್ಟಾರೆ ಜನಜೀವನ ಸುಗಮವಾಗಿರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದರು.
ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿಯೇ ಓಡಾಡಬೇಕು. ಈ ವಿಚಾರದಲ್ಲಿ ರಾಜೀ ಬೇಡ ಎಂದು ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ಗಳನ್ನೇ ವಾಹನ ಸವಾರರು ಧರಿಸಬೇಕಾಗಿದೆ. ಈ ವಿಚಾರದಲ್ಲಿ ಸವಾರರ ರಕ್ಷಣೆ ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗದಂತೆ ಸೂಕ್ತ ವ್ಯವಸ್ಥೆ ಜಾರಿ ಮಾಡಲು ಸಹ ಆಯಾ ಠಾಣೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಸ್ ನಿಲ್ದಾಣಗಳ ಬಳಿ ಸಂಚಾರ ವ್ಯವಸ್ಥೆಯಲ್ಲಿ ಸಮಸ್ಯೆಗೆ ಅವಕಾಶವಾಗದಂತೆ ಎಚ್ಚರ ವಹಿಸಲು ಟ್ರಾಫಿಕ್ ಸಿಬ್ಬಂದಿ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.
ನಗರ, ಪಟ್ಟಣ ಪ್ರದೇಶಗಳಲ್ಲಿ ಪಾರ್ಕಿಂಗ್, ರಸ್ತೆ ಬದಿ ವ್ಯಾಪಾರ ಇತ್ಯಾದಿ ಆಯಾ ಸ್ಥಳೀಯ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ನಿರ್ಧಾರಗಳು, ಸಂಬಂಧಿಸಿದಂತೆ ಅಧಿಕಾರಿಗಳ ಬಳಿಯೂ ತಾವು ಚರ್ಚಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಗೆ ಒತ್ತು ನೀಡಲಾಗುವುದು. ಚನ್ನಪಟ್ಟಣ ನಗರದ ಮೂಲಕ ಹಾದು ಹೋಗಿರುವ ಹೆದ್ದಾರಿ ರಸ್ತೆಯ ನಡುವಿನ ಡಿವೈಡರ್ ಎತ್ತರಿಸಲು ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆಯಲಾಗುವುದು.
ರಾಮನಗರದ ಕಡೆಯಿಂದ ಬಿಡದಿ ಪಟ್ಟಣಕ್ಕೆ ಪ್ರವೇಶದಲ್ಲಿರುವ ಸೇತುವೆ ಕಿರಿಯದಾಗಿದೆ. ಪಾದಾಚಾರಿಗಳ ಓಡಾಟಕ್ಕೆ ಸ್ಥಳವೇ ಇಲ್ಲ ಎಂದು ವರದಿಗಾರರು ಗಮನ ಸೆಳೆದಾಗ ಆ ಬಗ್ಗೆಯೂ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.




