ಕುಂದಗೋಳದ ಪುಟ್ಟ ಪೋರಿಗೆ ಒಲಿದು ಬಂದ ಡಾಕ್ಟರೇಟ್: ಮಗುವಿನ ಬುದ್ಧಿ ಶಕ್ತಿಗೆ ಮನಸೋತ ಡಾ.ರಾಜ್ ಫ್ಯಾಮಿಲಿ

ಧಾರವಾಡ: ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಗಳೇ ಮೊದಲ ಗುರುಗಳು ಅನ್ನುವ ಮಾತಿಗೆ ಇಲ್ಲೊಬ್ಬ ಪುಟ್ಟ ಪೋರಿ ಸಾಕ್ಷಿಯಾಗಿದ್ದಾಳೆ. ಧಾರವಾಡ ಕುಂದಗೋಳ ತಾಲೂಕಿನ ಪೋರಿಯ ತನ್ನ ಬುದ್ಧಿ ಶಕ್ತಿಯಿಂದ ಕುಂದಗೋಳ ಜನತೆ ಸೇರಿದಂತೆ ರಾಜ್ಯದ ಗಡಿಯಾಚೆಯ ಜನರ ಗಮನ ಸೆಳೆಯುವುದರ ಮೂಲಕ, ಈಗ ಕೇವಲ ತನ್ನ ಆರನೇ ವಯಸ್ಸಿಗೆ ಡಾಕ್ಟರೇಟ್ ಪಡೆದುಕೊಂಡು ಸಾಧನೆ ಮಾಡಿದ್ದಾನೆ ಮಾಡಿದ್ದಾಳೆ. ಈ ಮೂಲಕ ಇತರೆ ಮಕ್ಕಳಿಗೂ ಈಗ ಈ ಪೋರಿ ಮಾದರಿಯಾಗಿ ನಿಂತಿದ್ದಾಳೆ.
ಪಟಪಟನೆ ಅಳ್ಳು ಹುರಿದಂತೆ ಮಾತನಾಡುವ ಈ ಬಾಲಕಿಯ ಹೆಸರು ಶ್ರೀಶಾ ಮುದಗನ್ನವರ್. ಕೇಳಿದ ಪ್ರಶ್ನೆಗಳಿಗೆ ಥಟ್ಟನೆ ಉತ್ತರ ಹೇಳುವ ಕೌಶಲ್ಯ, ನಟ ಸಾರ್ವಭೌಮ ಡಾ. ರಾಜ್ಕುಮಾರ್ ನಟನೆಯ 200 ಕ್ಕೂ ಅಧಿಕ ಸಿನಿಮಾಗಳ ಹೆಸರನ್ನು ಕೇವಲ 3 ನಿಮಿಷಗಳಲ್ಲಿ ಹೇಳುವ ಬುದ್ಧಿಶಕ್ತಿ, ಶ್ಲೋಕ- ಮಂತ್ರಗಳು ಸೇರಿದಂತೆ ಇವಳ ಅಘಾದ ನೆನಪಿನ ಶಕ್ತಿ ಹೊಂದಿದ್ದು, ಪುಟ್ಟ ಪೋರಿಯ ಬುದ್ಧಿ ಶಕ್ತಿ ನೋಡಿದ ತಮಿಳುನಾಡು ರಾಜ್ಯ ದಿ ಯೂನಿವರ್ಸಲ್ ತಮಿಳು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ನ್ನು ತನ್ನದಾಗಿಸಿಕೊಂಡಿದ್ದಾಳೆ.
ಕುಂದಗೋಳ ಪಟ್ಟಣದ ಈಶ್ವರ ಮುದಗನ್ನವರ್ ಹಾಗೂ ಕೀರ್ತಿ ಮುದಗನ್ನವರ್ ದಂಪತಿಗಳಿಗೆ ಜನಿಸಿದ ಮಗು ಶ್ರೀಶಾ ಮುದಗನ್ನವರ. ತನ್ನ 6 ನೇ ವಯಸ್ಸಿಗೆ ಅಘಾದ ಸಾಧನೆ ಮಾಡುವ ಮೂಲಕ, ಡಾಕ್ಟರೇಟ್ ಪಡೆದುಕೊಂಡಿದ್ದಾಳೆ. ಈಗಾಗಲೇ ಈ ಬಾಲಕಿ ಸಾಕಷ್ಟು ಹಿರಿಮೆ-ಗರಿಮೆಗಳನ್ನ ತಣ್ಣದಾಗಿಸಿಕೊಂಡಿದ್ದು, ಈಕೆಯ ಚಾತುರ್ಯಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ಎಕ್ಸಕ್ಲೂಸಿವ್ ವಲ್ಡ್ ರೆಕಾರ್ಡ್, ಕರ್ನಾಟಕ ಅಚಿವರ್ಸ್ ಆಫ್ ಬುಕ್ ರೆಕಾರ್ಡ್, ಪ್ಯೂಚರ್ ಕಲಾಮ್ ಬುಕ್ ಆಫ್ ರೆಕಾರ್ಡ್, ದಿ ಯುನಿವರ್ಸ್ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ಅಷ್ಟೇ ಅಲ್ಲದೆ ಇತ್ತೀಚಿಗೆ ತಮಿಳುನಾಡು ಮೂಲದ ದಿ ಯುನಿವರ್ಸಲ್ ತಮಿಳು ವಿಶ್ವವಿದ್ಯಾಲದಿಂದ ಡಾಕ್ಟರೇಟ್ ಪಧವಿ ಪಡೆಯುವುದರ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಇನ್ನೂ ಈ ಆರು ವರ್ಷದ ಪೋರಿಯ ಸಾಧನೆ ಇಷ್ಟಕ್ಕೆ ನಿಲ್ಲುವುದಿಲ್ಲ.
ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ. ರಾಜಕುಮಾರ ನಟನೆಯ 200 ಕ್ಕೂ ಅಧಿಕ ಸಿನಿಮಾಗಳನ್ನ ಕೇವಲ 3 ನಿಮಿಷಗಳಲ್ಲಿ ಹೇಳುವ ಮೂಲಕ ರಾಜ್ ಫ್ಯಾಮಿಲಿಯ ಜೊತೆಗೆ ಸಿನಿ ಪ್ರೀಯರ ಮೆಚ್ಚುಗೆಗೂ ಪಾತ್ರವಾಗಿದ್ದಾಳೆ. ಈ ಹಿಂದೆ ಬಾಲಕಿ ಶ್ರೀಶಾಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಭೇಟಿಯಾಗಿ ಮೆಚ್ಚುಗೆಯನ್ನು ಕೂಡಾ ವ್ಯಕ್ತಪಡಿಸಿದ್ದಾರೆ.
ಇನ್ನೂ ಮಗಳ ಸಾಧನೆ ಕುರಿತು ಹರ್ಷ ವ್ಯಕ್ತ ಪಡಿಸಿ ತಾಯಿ ಕೀರ್ತಿ ಮುದಗನ್ನವರ್ ಮಾತನಾಡಿ, ಇತರೆ ಮಕ್ಕಳು ಓದಲು ಹರಸಾಹಸ ಪಡುವಂತಹ ಎಷ್ಟೋ ಮಕ್ಕಳನ್ನು ನಾವು ನೋಡಿದ್ದೇವೆ. ಸಣ್ಣವಳು ಇರುವಾಗಲೇ ಪುಸ್ತಕವನ್ನು ಕೇವಲ ಒಂದು ವರ್ಷದಲ್ಲೇ ಮುಗಿಸಿ ಅಚ್ಚರಿ ಪಡಿಸಿದ್ದಳು. ಹೀಗಾಗಿ ಅವಳಲ್ಲಿ ವಿಶೇಷತೆ ಇದೆ ಎಂದು ಪರಿಗಣಿಸಿ ಮನೆಯಲ್ಲೇ ತರಬೇತಿ ನೀಡಿದ್ದೇವೆ. ಈಗಾಗಲೇ ಅವಳ ಬುದ್ಧಿ ಶಕ್ತಿಗೆ ಸಾಕಷ್ಟು ಪುರಸ್ಕಾರ ಪಡೆದಿದ್ದಾಳೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿದ್ದಾಳೆ ಎಂದು ಆಶಯ ವ್ಯಕ್ತ ಪಡಿಸಿದರು.
ಒಟ್ಟಿನಲ್ಲಿ ಮನೆಯ ಮೊದಲ ಪಾಠ ಶಾಲೆಯಿಂದ ಶ್ರೀಶಾ ಚಿಕ್ಕ ವಯಸ್ಸಿನಲ್ಲಿ ಸಾಧನೆಯ ಮೆಟ್ಟಿಲುಗಳನ್ನು ಹತ್ತುತ್ತಾ ಸಾಗುತ್ತಿದ್ದಾಳೆ. ಮಕ್ಕಳಲ್ಲಿರುವ ಇಚ್ಛಾಶಕ್ತಿ ಅನುಗುಣವಾಗಿ ತಂದೆ ತಾಯಂದಿರು ಅವರ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಹೋದ್ರೆ ಎಲ್ಲ ಮಕ್ಕಳು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ ಎಂಬುವುದನ್ನು ಶ್ರೀಶಾ ತಂದೆ ತಾಯಿಂದಿರು ಇಲ್ಲಿ ಎತ್ತಿ ತೋರಿಸಿದ್ದಾರೆ.




