ಬಾಗಲಕೋಟೆ : ಬರೋಬ್ಬರಿ 3 ಲಕ್ಷ 25ಕ್ಕೆ ಮಾರಾಟವಾದ ರಾಜಾ ಹೋರಿ

ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳದಲ್ಲಿ ರೈತರೊಬ್ಬರ 18 ತಿಂಗಳ ಹೋರಿ ಬರೋಬ್ಬರಿ 3 ಲಕ್ಷ 25 ಸಾವಿರಕ್ಕೆ ಮಾರಾಟವಾಗುವ ಮೂಲಕ ರೈತರ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದ ಕುಡಚಿ ರಸ್ತೆಯ ನಾಲ್ಕನೇ ಕಾಲುವೆಯ ತೋಟದ ರೈತ ಭೀಮಪ್ಪ ಸತ್ಯಪ್ಪ ಬರಡಗಿ(ಒಡೆಯರ) ಎಂಬುವರ ಕಿಲಾರಿ ತಳಿಯ ಹೋರಿ 3ಲಕ್ಷ 25 ಸಾವಿರ ರೂಪಾಯಿಗೆ ಮಾರಾಟವಾಗುವ ಮೂಲಕ ಈ ಭಾಗದಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಹೋರಿ ಎಂದು ದಾಖಲೆ ಬರೆದಿದೆ. ಒಂದು ವರ್ಷದ ಹಿಂದೆ ಮಹಾರಾಷ್ಟ್ರದ ಪಂಡರಪೂರದಲ್ಲಿ 6 ತಿಂಗಳ ಕರುವನ್ನು 1ಲಕ್ಷ ರೂ ಗೆ ಖರೀದಿಸಿ ತಂದಿದ್ದಾರೆ. ಹೋರಿ ಕರುವನ್ನು ಬಹಳಷ್ಟು ಮುತುವರ್ಜಿಯಿಂದ ಬೆಳೆಸಿದ್ದಾರೆ. ಅದಕ್ಕೆ ದಿನ ಆಹಾರವಾಗಿ ಗೋಧಿ, ಮೈದಾ, ಹಾಲು, ಸದಕ, ಶೇಂಗಾ ಹಿಂಡಿ, ಗಾಣದ ಎಣ್ಣೆ, ಬಾಳೆಹಣ್ಣು ಸೇರಿದಂತೆ ಒಣ ಹಾಗೂ ಹಸಿ ಮೇವನ್ನು ಕ್ರಮಬದ್ದವಾಗಿ ನೀಡುತ್ತಿದ್ದರು. ಹಲವು ಜಾತ್ರೆ, ಜಾನುವಾರು ಪ್ರದರ್ಶನಗಳಲ್ಲಿ ಕೂಡ ಈ ಹೋರಿ ಭಾಗಿಯಾಗಿ ಬಹುಮಾನ ಗಿಟ್ಟಿಸಿಕೊಂಡಿದೆ.
ರೈತ ಭೀಮಪ್ಪ ಹೈನುಗಾರಿಕೆಗಾಗಿ ವಿದೇಶಿ ತಳಿಯ ಹಸುಗಳನ್ನು ಹೆಚ್ಚಾಗಿ ಸಾಕುತ್ತಿರುವ ರೈತರ ಮಧ್ಯೆ ಭೀಮಪ್ಪ ಅವರ ಮಾವನಾದ ಶಂಕರ ಒಡೆಯರ ಅವರ ಮಾರ್ಗದರ್ಶನದಲ್ಲಿ ದೇಶಿ ತಳಿಯ ಹಸು, ಹೋರಿ ಸಾಕುವುದನ್ನು ಮೈಗೂಡಿಸಿಕೊಂಡಿದ್ದಾರೆ. ಈವರೆಗೆ 7 ರಿಂದ 8 ಹೋರಿಗಳನ್ನು ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ಅದರಲ್ಲಿ ಈ ರಾಜಾ ಎನ್ನುವ ಹೋರಿ ಅತೀ ಹೆಚ್ಚಿಗೆ ಮಾರಾಟವಾಗಿದ್ದಕ್ಕೆ ಸಹಜವಾಗಿಯೇ ಮಾಲೀಕರಿಗೆ ಖುಷಿ ತಂದಿದೆ.
ಕೇವಲ ಮಾರಾಟ ಮಾತ್ರ ಮಾಡದೆ ಹಲವಾರು ಜಾತ್ರೆ, ಜಾನುವಾರುಗಳ ಪ್ರದರ್ಶನಗಳಲ್ಲಿ ಭಾಗಿಯಾಗಿ ಬಹುಮಾನಗಳನ್ನು ನೆನಪಿನ ಕಾಣಿಕೆಗಳನ್ನು ಪಡೆದುಕೊಂಡಿದ್ದಾರೆ. ರಾಜಾ ಹೆಸರಿನ ಹೋರಿಯನ್ನು ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಅಶೋಕ ಕುರಿ ಅವರಿಗೆ 3.25 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಹೋರಿಗೆ ಗುಲಾಲದಿಂದ ಸಿಂಗರಿಸಿದ್ದು ಅಶೋಕ್ ಎಂಬುವರು ಹೋರಿಯನ್ನು ಕೊಂಡೊಯ್ದಿದ್ದಾರೆ.




