Latestಕಲಬುರ್ಗಿಜಿಲ್ಲಾ ಸುದ್ದಿಸ್ಪೆಷಲ್ ಸ್ಟೋರೀಸ್

ಪಕ್ಕದಲ್ಲೇ ನೀರಿದ್ರೂ ಹಸನಾಗದ ಅನ್ನದಾತರ ಬದುಕು: ರೈತರ ಗೋಳು ಕೇಳೊರ್ಯಾರು?..

ಕಲಬುರ್ಗಿ : ದೀಪದ ಕೆಳಗೆ ಕತ್ತಲು ಎಂಬಂತೆ, ಪಕ್ಕದಲ್ಲೆ ಬೃಹತ್ ನೀರಾವರಿ ಸೌಲಭ್ಯವಿದ್ದರೂ, ಜಮೀನಿನಲ್ಲಿ ಬೆಳೆಗಳು ಮಾತ್ರ ನೀರಿಲ್ಲದೆ ಒಣಗಿ ಹೋಗಿವೆ. ಏತ ನೀರಾವರಿ ಯೋಜನೆಯಿಂದ ಬಂಗಾರದಂತಹ ಬೆಳೆ ಬೆಳೆದು ಒಂದಿಷ್ಟು ಆರ್ಥಿಕವಾಗಿ ಸದೃಢವಾಗಬಹುದೆಂಬ ಕನಸು ಕಟ್ಟಿಕೊಂಡಿದ್ದ ರೈತರ ಕನಸು ಕನಸ್ಸಾಗಿಯೇ ಉಳಿದಿದೆ.

ಹೌದು, ಊರಿನಲ್ಲಿ ಸಮೃದ್ಧವಾಗಿ ನದಿ ಹರಿಯುತ್ತಿದ್ದರೂ ಬೆಳೆ ಮಾತ್ರ ಒಣಗಿ ನಿಲ್ಲುತ್ತಿವೆ. ಅಂದಹಾಗೆ ಇಂತಹದೊಂದು ಪರಸ್ಥಿತಿ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದಲ್ಲಿ ಕಂಡು ಬರುತ್ತಿದೆ. ಕೆಳದಂಡೆ ಮುಲ್ಲಾಮಾರಿ ಯೋಜನೆ ಅನುಷ್ಠಾನ ಮಾಡಿದ್ರೆ 3710 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಅನುಷ್ಠಾನಕ್ಕೆ 204 ಕೋಟಿಗಳಷ್ಟು ಹಣದ ಅವಶ್ಯಕತೆ ಇದ್ದು, ಈಗಾಗಲೇ ಹಣ ಮಂಜೂರಾತಿಗಾಗಿ ಅಂದಾಜು ಪಟ್ಟಿಯನ್ನ ಕರ್ನಾಟಕ ನೀರಾವರಿ ನಿಗಮ ಇಲಾಖೆಗೆ ಸಲ್ಲಿಸಲಾಗಿದೆ. ಆದರೆ ಪ್ರಸ್ತಾವನೆ ಸಲ್ಲಿಸಿ ಹಲವು ದಿನಗಳಾದರು ಯೋಜನೆಗೆ ಮಂಜೂರಾತಿ ಸಿಗದ ಹಿನ್ನಲೆಯಲ್ಲಿ, ಮುಲ್ಲಾಮಾರಿ ಯೋಜನೆ ನೆನೆಗುದಿಗೆ ಬಿದ್ದಿದೆ.‌ ಹೀಗಾಗಿ ಯೋಜನೆಗೆ ಬೇಕಾದ ಹಣವನ್ನ ಬಿಡುಗಡೆ ಮಾಡಿ ಶೀಘ್ರವೇ ಏತನೀರಾವರಿ ಯೋಜನೆ ಜಾರಿ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಹೊಟ್ಟೆಪಾಡಿಗಾಗಿ ಅನ್ನದಾತರ ಗುಳೆ :

ಚಿಂಚೋಳಿ ಭಾಗದಲ್ಲಿ ಭೀಕರ ಬರಗಾಲ ಹಿನ್ನಲೆಯಲ್ಲಿ, ತಾಲೂಕಿನ ರೈತರ ಬದುಕು ಹಸನಾಗಿಸಲು ಸರ್ಕಾರ 1972 ರಲ್ಲಿ ಕೆಳದಂಡೆ ಮುಲ್ಲಾಮಾರಿ ಯೋಜನೆಯನ್ನ ಜಾರಿಗೊಳಿಸಲಾಗಿತ್ತು. 2.86 ಟಿಎಂಸಿ ಸಾಮಾರ್ಥ್ಯದ ಈ ಯೋಜನೆ ಕೇವಲ ನಾಮಕವಾಸ್ತೆ ಮಾಡಲಾಗಿದೆ. ಏಕಂದ್ರೆ ಇದುವರೆಗೆ ಕೆಲ ಗ್ರಾಮಗಳು ಬಿಟ್ಟು ಬಹುತೇಕ ಗ್ರಾಮದ ಜಮೀನುಗಳಿಗೆ ಕಾಲುವೆ ನೀರು ಹರಿದಿಲ್ಲ. ಕಾಲುವೆ ನೀರು ಹರಿದರೆ ತಮಗೆ ಬೇಕಾದಂತಹ ಬೆಳೆ ಬೆಳೆದು ಬದುಕು ಹಸನು ಮಾಡಿಕೊಳ್ಳುವ ಕನಸ್ಸು ಕಟ್ಟಿಕೊಂಡಿದ್ದರು. ಆದರೆ ಜಮೀನಿನಲ್ಲಿ ನೀರಿಲ್ಲದೆ ಬೆಳೆಗಳು ಬೆಳೆಯಕ್ಕಾಗದೇ, ಹೊಟ್ಟೆಪಾಡಿಗಾಗಿ ರೈತರು ದೂರದ ಮುಂಬಯಿ, ಹೈದ್ರಾಬಾದ್, ಬೆಂಗಳೂರು, ಗೋವಾ ಸೇರಿದಂತೆ ವಿವಿಧೆಡೆ ಗುಳೆ ಹೋಗಿದ್ದಾರೆ.

3710 ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ:

ಮುಲ್ಲಾಮಾರಿ ಯೋಜನೆ ಜಾರಿಯಾದರೆ ಐನಾಪೂರ, ಗಡಿಲಿಂಗದಹಳ್ಳಿ, ಚನ್ನೂರ, ಎಲ್ಲಾಮಡಿ, ಬೆನಕನಹಳ್ಳಿ ಗ್ರಾಮದ ರೈತರಿಗೆ ವರದಾನವಾಗಲಿದ್ದು, ಯೋಜನೆಯಿಂದ ಒಟ್ಟು 3710 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಹೀಗಾಗಿ ಯೋಜನೆಯನ್ನ ಅನುಷ್ಟಾನಗೊಳಿಸಲು ಶಾಸಕರು ಮತ್ತು ಸಂಸದರು ಮುಂದಾಗಿ ಸರ್ಕಾರದ ಮೇಲೆ ಒತ್ತಡ ತರಬೇಕು ಅಂತಾ ಐನಾಪೂರ ರೈತರು ಮನವಿ ಮಾಡಿದ್ದಾರೆ. ‌

ಅದೆನೇ ಇರಲಿ ದೀಪದ ಬುಡದಲ್ಲಿ ಕತ್ತಲು ಎಂಬಂತೆ, ಪಕ್ಕದಲ್ಲೆ ಬೃಹತ್ ನೀರಾವರಿ ಸೌಲಭ್ಯವಿದ್ದರು ಸಹ, ಜಮೀನಿನಲ್ಲಿನ ಅನೇಕ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ಇನ್ನಾದರು ಸರ್ಕಾರ ಮನಸ್ಸು ಮಾಡಿ ಯೋಜನೆ ಅನುಷ್ಠಾನಕ್ಕೆ ಬೇಕಾಗಿರುವ ಹಣವನ್ನ ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button