ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ
ಕುಂದಗೋಳದಲ್ಲಿ ಸಿಡಿಲಿಗೆ ಕುದುರೆ ಮತ್ತು 13 ಕುರಿಗಳು ಬಲಿ

ಕುಂದಗೋಳ: ತಾಲೂಕಿನ ಎಲ್ಲೆಡೆ ಸುರಿದ ಭಾರಿ ಮಳೆ ಹಾಗೂ ಗುಡುಗು ಸಿಡಿಲಿನ ಹೊಡೆತಕ್ಕೆ 13 ಕುರಿಗಳು ಹಾಗೂ ಒಂದು ಕುದುರೆ ಮೃತಪಟ್ಟ ಘಟನೆ ದೇವನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ದೇವನೂರು ಗ್ರಾಮದ ಹೊರವಲಯದ ಜಮೀನೊಂದರಲ್ಲಿ ತಾತ್ಕಾಲಿಕ ಶಡ್ ಹಾಕಿಕೊಂಡು ವಾಸವಿದ್ದ ಕುರಿಗಾಹಿಗಳ ಹಿಂಡಿಗೆ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ 13 ಕುರಿಗಳು ಹಾಗೂ ಒಂದು ಕುದುರೆ ಬಲಿಯಾಗಿವೆ.
ಬೆಳಗಾವಿ ಜಿಲ್ಲೆಯ ರಾಯಭಾಗದಿಂದ ಬಂದು ದೇವನೂರು ಗ್ರಾಮದ ಹೊರವಲಯದಲ್ಲಿ ವಾಸವಿದ್ದ ವಿಠಲ ಕಾಣಪ್ಪ ಲಟ್ಟಿ ಎಂಬವರಿಗೆ ಈ 13 ಕುರಿಗಳು ಹಾಗೂ ಒಂದು ಕುದುರೆ ಸೇರಿದ್ದಾಗಿದೆ ಎನ್ನಲಾಗಿದೆ. ದುರಂತ ಘಟನೆಯಿಂದಾಗಿ ಕುರಿಗಾಹಿ ಕಂಗಾಲಾಗಿದ್ದು, ಘಟನಾ ಸ್ಥಳಕ್ಕೆ ಕುಂದಗೋಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.




