Latestಕಲಬುರ್ಗಿಜಿಲ್ಲಾ ಸುದ್ದಿ

24×7 ಲೈವ್ ಕನ್ನಡ ಇಂಪ್ಯಾಕ್ಟ್: 3 ವರ್ಷ ಅನಾಥವಾಗಿ ನಿಂತಿದ್ದ 8.5 ಕೋಟಿ ರೂ. ಕಟ್ಟಡ ಉದ್ಘಾಟನೆ

ಕಲಬುರಗಿ: 8.5 ಕೋಟಿ ವೆಚ್ಚದಲ್ಲಿ ವಿಶಾಲವಾದ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡದೆ ಮೂರು ವರ್ಷದಿಂದ ಅನಾಥವಾಗಿ ಬಿಡಲಾಗಿದ್ದ ಕಲಬುರಗಿ ಪ್ರಾದೇಶಿಕ ತರಬೇತಿ ಕೇಂದ್ರದ ಬಗ್ಗೆ 24×7 ಲೈವ್ ಕನ್ನಡ ಸುದ್ದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಕಟ್ಟಡ ಲೋಕಾರ್ಪನೆ ಮಾಡಿದ್ದಾರೆ. ಇದು 24×7 ಲೈವ್ ಕನ್ನಡ ವರದಿಗೆ ಸಿಕ್ಕ ಇಂಪ್ಯಾಕ್ಟ್ ಆಗಿದೆ.

ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ಸಿಬ್ಬಂದಿಗಳ ತರಬೇತಿಗಾಗಿ ನಿರ್ಮಾಣವಾದ ಅಚ್ಚುಕಟ್ಟಾದ ಕಟ್ಟಡವಿದು. ಕಲಬುರಗಿ ಹೊರವಲಯ ಕೆಸರಟಗಿ ಗ್ರಾಮದ 3.5 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ತರಬೇತಿ ಕೇಂದ್ರಕ್ಕಾಗಿ 7.05 ಕೋಟಿ ಹಾಗೂ ಜಿ.ಪಂ ಸಂಪನ್ಮೂಲ ತರಬೇತಿ ಕೇಂದ್ರಕ್ಕೆ 1.50 ಕೋಟಿ, ಒಟ್ಟು 8.55 ಕೋಟಿ ವೆಚ್ಚದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ.

ನೆಲ ಮಹಡಿಯಲ್ಲಿ ಗ್ರಂಥಾಲಯ, ಆಡಳಿತಾತ್ಮಕ ಕೋಣೆ, 5 ಸಾಮಾನ್ಯ ಕೋಣೆ, ಅಡುಗೆ ಕೋಣೆ, ಶೌಚಾಲಯ, ಮೊದಲನೇ ಮಹಡಿಯಲ್ಲಿ 2 ತರಬೇತಿ ಹಾಲ್, 2 ಅತಿಥಿಗೃಹ ಕೋಣೆ, 12 ಸಾಮಾನ್ಯ ಕೋಣೆ ಮತ್ತು ಸಾಮಾನ್ಯ ಶೌಚಾಲಯ, ಎರಡನೇ ಮಹಡಿಯಲ್ಲಿ 100 ಜನ ಸಾಮಥ್ರ್ಯದ 2 ಡಾರ್ಮಿಟರಿ, 12 ಸಾಮಾನ್ಯ ಕೋಣೆ, ಕಂಪ್ಯೂಟರ್ ಲ್ಯಾಬ್, ತರಬೇತಿ ಕೋಣೆ, ಹೀಗೆ ಒಟ್ಟಾರೆ 43525 ಚದುರ ಅಡಿ ಅಳತೆಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದ್ರೆ ನಿರ್ಮಾಣಗೊಂಡು ಮೂರು ವರ್ಷ ಗತಿಸಿದರೂ ಉದ್ಘಾಟನೆ ಭಾಗ್ಯಮಾತ್ರ ಸಿಕ್ಕಿರಲಿಲ್ಲ, ಕೊಟ್ಯಾಂತರ ರೂಪಾಯಿಯ ಕಟ್ಟಡ ಅನಾತವಾಗಿ ನಿಂತಿತ್ತು.

ಈ ಕುರಿತು ಜುಲೈ 21 ರಂದು ‘ನಿರ್ಮಾಣವಾದ್ರೂ ಉದ್ಘಾಟನೆ ಭಾಗ್ಯ ಕಾಣದ ತರಬೇತಿ ಕೇಂದ್ರ’ ಶೀರ್ಷಿಕೆಯಲ್ಲಿ 24×7 ಲೈವ್ ಕನ್ನಡ ವರದಿ ಮಾಡಿತ್ತು. ವರದಿಗೆ ಸ್ಪಂಧಿಸಿದ ಕೆಆರ್‌ಐಡಿಎಲ್ ಅಧಿಕಾರಿಗಳು ಶೀಘ್ರವೇ ಉದ್ಘಾಟನೆ ಮಾಡುವದಾಗಿ ಭರವಸೆ ನೀಡಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಿಂದ ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಿದ್ದಾರೆ. ಪ್ರಗತಿಪರ ಚಿಂತಕರು, ಸ್ಥಳಿಯರು 24×7 ಲೈವ್ ಕನ್ನಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ಮೈಸೂರಿಗೆ ಹೊಗೋದು ತಪ್ಪಿತು:

ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ. ಸಂಸ್ಥೆಗೆ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಕಾಲ-ಕಾಲಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ತರಬೇತಿ ನೀಡಲು ಈ ತರಬೇತಿ ಕೇಂದ್ರ ನಿರ್ಮಿಸಲಾಗಿದೆ. ಹಿಂದೆಲ್ಲ ತರಬೇತಿ ಪಡೆಯಲು ಈ ಭಾಗದ ಪ್ರತಿನಿಧಿಗಳು ಮೈಸೂರಿಗೆ ಹೋಗಬೇಕಾಗಿತ್ತು. ಈಗ ಕಲಬುರಗಿಯಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರ ತೆರೆದಿರುವುದರಿಂದ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳ ಜನಪ್ರತಿನಿಧಿಗಳು ಇಲ್ಲಿಯೆ ತರಬೇತಿ ಪಡೆಯಬಹುದಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button