
ಮುಂಬೈ: ಕೊನೆಯವರೆಗೂ ನಡೆದ ಹೋರಾಟದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ರೋಚಕ ಗೆಲುವು ಸಾಧಿಸಿದೆ. ಮುಂಬೈನ ಡಾ.ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಪಡೆ 12 ರನ್‍ಗಳ ಗೆಲುವು ದಾಖಲಿಸಿತು.
ಗೆಲುವಿಗೆ 170 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್, ಸ್ಲಾಗ್ ಓವರ್‌ಗಳಲ್ಲಿ ಬಿರುಸಿನ ರನ್ ಕಲೆಹಾಕುವ ಪ್ರಯತ್ನದಲ್ಲಿ ಸತತ ವಿಕೆಟ್ ಕಳೆದುಕೊಂಡ ಪರಿಣಾಮ ಸೂಪರ್ ಜೈಂಟ್ಸ್‌ಗೆ ಸಂಪೂರ್ಣ ಶರಣಾಯಿತು. 20 ಓವರ್‌ಗಳಲ್ಲಿ 9 ವಿಕೆಟ್‌ಗೆ 159 ರನ್ ಮಾತ್ರವೇ ಗಳಿಸಿ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಆಘಾತಕ್ಕೊಳಗಾಗಿದೆ.
ಸನ್‌ರೈಸರ್ಸ್ ಪರ ರಾಹುಲ್ ತ್ರಿಪಾಠಿ (44) ಮತ್ತು ನಿಕೋಲಸ್ ಪೂರನ್ (34)ರನ್ ಮೂಲಕ ಉತ್ತಮ ಆರಂಭ ಪಡೆದರೂ, ಪಂದ್ಯ ಗೆದ್ದುಕೊಡಲು ಬೇಕಿದ್ದ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಲಖನೌ ಪರ ಶ್ರೇಷ್ಠ ಲಯಕ್ಕೆ ಮರಳಿದ ಅವೇಶ್ ಖಾನ್, 4 ಓವರ್‌ಗಳಲ್ಲಿ 24 ರನ್ ನೀಡಿ 4 ವಿಕೆಟ್‌ಗಳನ್ನು ಉರುಳಿಸಿದರು. ಜೇಸನ್ ಹೋಲ್ಡರ್ (3 ವಿಕೆಟ್) ಮತ್ತು ಕೃಣಾಲ್ ಪಾಂಡ್ಯ (2 ವಿಕೆಟ್) ಉತ್ತಮ ಸಾಥ್ ಕೊಟ್ಟರು.
ಗೆಲ್ಲಲು 41 ಎಸೆತಗಳಲ್ಲಿ 75 ರನ್ ಗಳಿಸಬೇಕಿದ್ದಾಗ ಜೊತೆಯಾದ ವೆಸ್ಟ್ ಇಂಡೀಸ್ ಬ್ಯಾಟರ್ ನಿಕೋಲಸ್ ಪೂರನ್ ಮತ್ತು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಜೋಡಿ ರೈಸರ್ಸ್ ತಂಡದ ಜಯದ ಆಸೆ ಚಿಗುರಿಸಿತು.
ಇವರಿಬ್ಬರು 48 ರನ್ ಕಲೆಹಾಕಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ, 18ನೇ ಓವರ್‌ನಲ್ಲಿ ದಾಳಿಗಿಳಿದ ಆವೇಶ್ ಖಾನ್ ಪಂದ್ಯಕ್ಕೆ ತಿರುವು ನೀಡಿದರು. ಸತತ ಎರಡು ಎಸೆತಗಳಲ್ಲಿ ನಿಕೋಲಸ್ ಪೂರನ್ (34) ಮತ್ತು ಅಬ್ದುಲ್ ಸಮದ್ (0) ವಿಕೆಟ್ ಕಬಳಿಸಿದ ಆವೇಶ್, ಪಂದ್ಯವನ್ನು ರೈಸರ್ಸ್ ಕೈಯಿಂದ ಕಸಿದುಕೊಂಡರು.




