
ಜಿ.ಮುಮ್ತಾಜ್ ಅಲೀಮ್
ಕರ್ನಾಟಕವೂ ಸೇರಿದಂತೆ ಭಾರತೀಯ ಸುದ್ದಿ ಮಾಧ್ಯಮಕ್ಕೆ ಬಹುಶಃ ಒಂದು ರೀತಿಯಲ್ಲಿ ತಾಲಿಬಾನ್ ಭೂತ ಹಿಡಿದುಕೊಂಡಿದೆ ಅನಿಸುತ್ತಿದೆ. ಸ್ವದೇಶದಲ್ಲಿ ಸಾವಿರ ಹುಳುಕುಗಳಿದ್ದರೂ ಅದನ್ನು ನಿರ್ಲಕ್ಷಿಸಿ ನೆರೆಯ ಆಫ್ಘಾನಿಸ್ತಾನದ ರಾಜಕೀಯ ವಿದ್ಯಮಾನಗಳ ಬಗ್ಗೆ ಅತಿ ಹೆಚ್ಚು ರೋಚಕ ಮತ್ತು ರಂಜಿತವಾಗಿ ಪೂರ್ವಾಗ್ರಹಪೀಡಿತ ಸುದ್ದಿ ಮತ್ತು ಕಾರ್ಯಕ್ರಮಗಳನ್ನು ಇನ್ನಿಲ್ಲದಂತೆ ಬಿತ್ತರಿಸಲಾರಂಭಿಸಿವೆ. ಮಾಧ್ಯಮಗಳು ಬೇಕಾದ್ದನ್ನು ಹೇಳಲಿ. ಅಂತಿಮವಾಗಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗುತ್ತದೆ ಮತ್ತು ನರೇಂದ್ರ ಮೋದಿ ಸರ್ಕಾರ ಅದನ್ನು ಬೆಂಬಲಿಸಿದೆ, ಇದಿಷ್ಟೆ ಹಕೀಕತ್ತು.
ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತೀಯ ಮೀಡಿಯಾ ತನ್ನ ಜವಾಬ್ದಾರಿಯನ್ನು ಅಂದರೆ ದೇಶದ ಜ್ವಲಂತ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ತಾಲಿಬಾನ್ ವಿಷಯಕ್ಕೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದನ್ನು ನೋಡಿದರೆ ಒಂದು ರೀತಿಯಲ್ಲಿ ದೇಶದ ಶ್ರೀಸಾಮಾನ್ಯನಿಗೆ ಬರೆಯುತ್ತಿರುವ ದ್ರೋಹ ಎಂದೆನ್ನದೇ ವಿಧಿಯಿಲ್ಲ.
ಬೆಲೆ ಏರಿಕೆ ಸುಳಿಯಲ್ಲಿ ಶ್ರೀಸಾಮಾನ್ಯ
ದೇಶದ ಜ್ವಲಂತ ಸಮಸ್ಯೆಗಳಲ್ಲಿ ಅತಿ ಮುಖ್ಯವಾಗಿ ಪೆಟ್ರೋಲ್, ಡೀಸಲ್ ಹಾಗೂ ಅಡುಗೆ ಅನಿಲದ ಬೆಲೆ ಇನ್ನಿಲ್ಲದಂತೆ ತಾರಕಕ್ಕೇರುತ್ತಲೇ ಸಾಗಿದೆ. 2014ರಲ್ಲಿ 410 ರೂಪಾಯಿ ಇದ್ದ ಅಡುಗೆ ಅನಿಲದ ಬೆಲೆ ಈಗ ಹೆಚ್ಚುಕಡಿಮೆ ಸಾವಿರ ರೂಪಾಯಿಯ ಸನಿಹದಲ್ಲಿದೆ. ಕೊರೋನಾ ಕಾರಣದಿಂದ ಬಳಲಿ ಬೆಂಡಾಗಿರುವ ದೇಶದ ಶ್ರೀಸಾಮಾನ್ಯನ ಮೇಲೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಹೊರೆ ಏರುತ್ತಲೇ ಇದೆ. ಯಾಕೆ, ಏನಿದರ ಹಿಂದಿನ ವ್ಯೂಹ ಎಂಬ ಮರ್ಮ ಅರಿಯದಾಗಿದೆ.
ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲ ಬೆಲೆ ಏರಿದರೆ ಸಾರಿಗೆ ವೆಚ್ಚ ಏರುತ್ತದೆ. ಸಾರಿಗೆ ಸಂಪರ್ಕ ವೆಚ್ಚ ಏರಿದರೆ ನಿತ್ಯದ ವಸ್ತುಗಳು ಸೇರಿದಂತೆ ಪ್ರತಿ ವಸ್ತುವಿನ ದರ ಗಗನಕ್ಕೇರುತ್ತದೆ. ದರ ಗಗನಕ್ಕೇರಿದರೆ ನಲುಗಿರುವ ದೇಶದ ಶ್ರೀಸಾಮಾನ್ಯ ಇನ್ನಷ್ಟು, ಮಗದಷ್ಟು ಬಳಲಿ ಬೆಂಡಾಗುತ್ತಾನೆ. ಜೀವನ ನಡೆಸಲು ಯಾತನೆ ಅನುಭವಿಸಬೇಕಾಗುತ್ತದೆ.
ಕೊರೋನಾ ಕಾರಣದಿಂದ ದೇಶದ ಜನತೆ ಮಾತ್ರ ಅಲ್ಲ ಆಡಳಿತ ನಡೆಸುವ ಸರ್ಕಾರಗಳೂ ಕೂಡ ಸಮಸ್ಯೆಗೆ ಸಿಲುಕಿವೆ ಎಂದು ಭಾವಿಸಲಾಗಿತ್ತು. ಆದರೆ ಮೊನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ನೀಡಿದ ಹೇಳಿಕೆಯನ್ನು ಗಮನಿಸಿದರೆ ಸರ್ಕಾರ ಅಸಹಾಯಕ ಸ್ಥಿತಿಗೆ ಸಿಲುಕಿ ಹೀಗೆ ಮಾಡುತ್ತಿಲ್ಲ ಬದಲಿಗೆ ಉದ್ದೇಶಪೂರ್ವಕವಾಗಿಯೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದೆನಿಸುತ್ತದೆ.
ಚುನಾವಣೆ ವೇಳೆ ಇಳಿಯುವುದೇ ಬೆಲೆ?
ದೇಶದ ಮಿನಿ ಮಹಾಚುನಾವಣೆ ಎಂದೇ ಭಾವಿಸಲಾಗಿರುವ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಆರು ತಿಂಗಳ ನಂತರ ನಡೆಯಲಿವೆ. ಇದಕ್ಕೂ ಮುನ್ನ ತಾರಕಕ್ಕೇರಿರುವ ಬೆಲೆಗಳು ಕೊಂಚಮಟ್ಟಿಗೆ ಇಳಿಕೆಯಾದರೆ ಅಚ್ಚರಿಪಡಬೇಕಾದ್ದಿಲ್ಲ. ಅದಕ್ಕಾಗಿ ಸರ್ಕಾರ ಕಾರ್ಯತಂತ್ರ ರೂಪಿಸಿದೆ. ಈಗ ಬೆಲೆ ಏರಿಸಿ ಚುನಾವಣೆ ಸಂದರ್ಭದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಸುವುದು ಅದರ ಉದ್ದೇಶವಾಗಿದೆ ಎಂಬ ಅಭಿಪ್ರಾಯಗಳಿವೆ.
ಕೇಂದ್ರ ವಿತ್ತ ಮಂತ್ರಿ ನಿರ್ಮಲ ಸೀತಾರಾಮನ್ ಹೇಳಿಕೆ ನಿಜಕ್ಕೂ ಚಿಂತನೆಗೆ ಗುರಿ ಮಾಡಿದೆ. ಅವರ ಪ್ರಕಾರ ಪ್ರಸಕ್ತ ಕೇಂದ್ರ ಸರ್ಕಾರ “ಯುಪಿಎ ಸರ್ಕಾರದ ಪಾಪದ ಹೊರೆಯನ್ನು ಹೊರೆತ್ತಿದೆ. ಅವರು ಆಯಿಲ್ ಬಾಂಡ್ ಗಳನ್ನು ಜಾರಿಗೊಳಿಸಿದ್ದರು. ಅದನ್ನು ನಾವು ಭರ್ತಿ ಮಾಡುತ್ತಿದ್ದೇವೆ” ಎಂದಿದ್ದಾರೆ. ವಾಸ್ತವದಲ್ಲಿ ತೈಲಬಾಂಡ್ ಗಳ ಪೂರ್ಣ ಪ್ರಮಾಣ ಏನಿದೆಯೋ ಅದರ ಹತ್ತಹನ್ನೆರಡು ಪಟ್ಟು ಅಧಿಕ ಹಣವನ್ನು ತೈಲೋತ್ಪನ್ನಗಳ ಮೇಲಿನ ತೆರಿಗೆಗಳ ಮೂಲಕ ಸರ್ಕಾರ ಈಗಾಗಲೇ ಬಾಚಿಕೊಂಡಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ 9 ಸಾವಿರದ 990 ಸಾವಿರ ಕೋಟಿ ರೂಪಾಯಿ ಆಯಿಲ್ ಬಾಂಡ್ ಗಳ ಮೇಲಿನ ಬಡ್ಡಿಯನ್ನು ಪಾವತಿಸಿದೆ. ಪ್ರತಿಯಾಗಿ 1 ಲಕ್ಷದ 60 ಸಾವಿರ ಕೋಟಿ ರೂಪಾಯಿ ತೈಲೋತ್ಪನ್ನಗಳ ಮೇಲಿನ ತೆರಿಗೆಗಳ ಮೂಲಕವೇ ಗಳಿಸಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸಂಸ್ಥೆಯ ಪ್ರೋ.ಅರುಣ್ ಕುಮಾರ್ ಪ್ರಕಾರ, ನೇರ ಹಾಗೂ ಪರೋಕ್ಷ ತೆರಿಗೆ ಪೈಕಿ ಪ್ರಸ್ತುತ ಕೇಂದ್ರ ಸರ್ಕಾರ ಜಿಎಸ್ಟಿ, ಅಬಕಾರಿ ಮತ್ತಿತರ ಪರೋಕ್ಷ ತೆರಿಗೆ ಮೂಲಕ ಸಂಪನ್ಮೂಲ ಕ್ರೋಢಿಕರಣಕ್ಕೆ ಆದ್ಯತೆ ನೀಡಿದಂತೆ ಕಂಡು ಬರುತ್ತಿದೆ. ಇದರ ಹೊರೆ ತನ್ನಿಂದತಾನೆ ಅಸಂಘಟಿತ ಕ್ಷೇತ್ರದ ಅಂದರೆ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಬೀಳುತ್ತದೆ. ಇದರಿಂದ ಹಣದುಬ್ಬರ ಹೆಚ್ಚುತ್ತದೆ. ಇದು ಬೆಲೆ ಏರಿಕೆಗೆ ನಾಂದಿ ಹಾಡುತ್ತದೆ.
ಇನ್ನೊಂದು ಅಂಶ ಎಂದರೆ ಕೇಂದ್ರ ಸರ್ಕಾರ ಪ್ರಸ್ತುತ ದೊಡ್ಡ ದೊಡ್ಡ ಉದ್ದಿಮೆದಾರರು ತಮ್ಮ ವ್ಯಾಪಾರೋದ್ಯಮ ಹೆಚ್ಚಿಸಲು ಅವರಿಗೆ ತೆರಿಗೆ ರಿಯಾಯಿತಿ ನೀಡುತ್ತಿದೆ. ಉದಾಹರಣೆಗೆ ಕಾರ್ಪೊರೇಟ್ ತೆರಿಗೆ ಪ್ರಮಾಣವನ್ನು ಇಳಿಸಿದೆ. ಆದರೆ ನಿರೀಕ್ಷೆಯಂತೆ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿಲ್ಲ. ಏಕೆಂದರೆ ಬೇಡಿಕೆ ಇಲ್ಲ. ಎಲ್ಲಿವರೆಗೆ ಬೇಡಿಕೆ ಇರುವುದಿಲ್ಲವೋ ಅಲ್ಲಿವರೆಗೆ ನಿರೀಕ್ಷಿತ ಗುರಿ ಈಡೇರುವುದಿಲ್ಲ.
ಹೀಗಾಗಿ ಪ್ರಸ್ತುತ ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲೆ ಹೊರೆ ಹೇರುವ ಪರೋಕ್ಷ ತೆರಿಗೆಗೆ ಆದ್ಯತೆ ನೀಡಿರುವುದರಿಂದ ಹಣದುಬ್ಬರ ಹೆಚ್ಚಾಗಿ ಅಂತಿಮವಾಗಿ ಜನಸಾಮಾನ್ಯರು ಬವಣೆಪಡುವಂತಾಗಿದೆ. ಇದು ಸರ್ಕಾರ ಪ್ರಸ್ತುತ ಅನುಸರಿಸುತ್ತಿರುವ ತಪ್ಪು ಆರ್ಥಿಕ ನೀತಿಯ ಪರಿಣಾಮ ಎಂಬುದು ಪ್ರೋ.ಅರುಣ್ ಕುಮಾರ್ ಅವರ ಅಭಿಪ್ರಾಯ.
ಸರ್ಕಾರದ ಮರ್ಜಿಯಂತೆ ನಡೆಯುವ ಕಂಪನಿಗಳು
ಹೇಳಿ-ಕೇಳಿ ಭಾರತದಲ್ಲಿ ತೈಲ ಹಾಗೂ ಅಡುಗೆ ಅನಿಲದ ಬೆಲೆಗಳನ್ನು ನಿರ್ಧರಿಸುವುದು ಇಂಡಿಯನ್ ಆಯಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್, ತೈಲ ಮತ್ತು ನೈಸರ್ಗಿಕ ಅನಿಲ (ಓಎನ್ ಜಿಸಿ)ಯಂತಹ ಸರ್ಕಾರಿ ಸಂಸ್ಥೆಗಳು. ಕೇಂದ್ರ ಸರ್ಕಾರದ ಅಧೀನದಲ್ಲಿ ಇವು ಕಾರ್ಯನಿರ್ವಹಿಸುವುದರಿಂದ ಸರ್ಕಾರ ಬಯಸಿದಾಗ ಬೆಲೆ ಏರಿಸುವುದು ಅಥವಾ ಇಳಿಸುವ ತಂತ್ರಗಾರಿಕೆಯನ್ನು ಅಲ್ಲಗೆಳೆಯುವಂತಿಲ್ಲ.
ಮೂಲತಃ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಮಾರುಕಟ್ಟೆ ದರಕ್ಕೆ ಲಿಂಕ್ ಆಗಿಬಿಡುತ್ತವೆ ಎಂದು ಭಾವಿಸಿ ತೈಲೋತ್ಪನ್ನಗಳ ಬೆಲೆ ಸುಧಾರಣೆಗೆ ಕೈಗೊಂಡ ಕ್ರಮಗಳಲ್ಲೇ ತಪ್ಪಿದೆ. ಸರ್ಕಾರಿ ಕಂಪನಿಗಳಾಗಲಿ ಖಾಸಗಿ ಕಂಪನಿಗಳಾಗಲಿ ಮಾರುಕಟ್ಟೆ ದರಕ್ಕೆ ಕೊಂಡಿಯಾಗಬೇಕು ಆದರೆ ಅದಾಗುತ್ತಿಲ್ಲ.
ಅಡುಗೆ ಅನಿಲ ಸಬ್ಸಿಡಿ ಮಾಯ!
ಇನ್ನು ಅಡುಗೆ ಅನಿಲದ ಮೇಲೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗಿದೆ. ಮಾರುಕಟ್ಟೆಯಲ್ಲಿ ಖಾಸಗಿಯವರು ಪೂರೈಸುವ ಅಡುಗೆ ಅನಿಲಕ್ಕೂ ಸರ್ಕಾರಿ ಕಂಪನಿಗಳ ಅನಿಲದರಕ್ಕೂ ವ್ಯತ್ಯಾಸವೇ ಇಲ್ಲದಂತಾಗಿದೆ. ಹೀಗಾಗಿ ಎರಡರ ದರವೂ ಹೆಚ್ಚುಕಡಿಮೆ ಸಾವಿರ ರೂಪಾಯಿಯ ಸನಿಹದಲ್ಲಿದೆ.
ಬಡವರ ಮೇಲೆಕೇ ಬೆಲೆ ಏರಿಕೆಯ ಬರೆ?
ಸರ್ಕಾರ ತನ್ನ ಜನಪ್ರಿಯ ಅಥವಾ ಕಲ್ಯಾಣ ಕಾರ್ಯಕ್ರಮಕ್ಕನುಸಾರ ಎಲ್ಲರಿಗೂ ಸಬ್ಸಿಡಿ ನೀಡುವ ಪದ್ಧತಿ ಚಾಲ್ತಿಯಲ್ಲಿದೆ. ನಿಧಾನವಾಗಿ ಇದನ್ನು ಬದಲಾಯಿಸುವ ಕೆಲಸಕ್ಕೆ ಮೋದಿ ಸರ್ಕಾರ ಈಗಾಗಲೇ ಕೈ ಹಾಕಿದೆ. ದುಡ್ಡಿದ್ದವರಿಗೂ ಗ್ಯಾಸ್ ಸಿಲಿಂಡರ್ ಸಬ್ಸಿಡಿ ನೀಡುವ ಬದಲು ಬಡವರಿಗೆ ಮಾತ್ರ ಸಬ್ಸಿಡಿ ನೀಡುವುದನ್ನು ಕಡ್ಡಾಯಗೊಳಿಸಬಹುದಾಗಿದೆ. ಅದನ್ನು ಬಿಟ್ಟು ದುಡ್ಡಿದ್ದವರ ಜತೆ ಬಡವರಿಗೂ ಅಡುಗೆ ಅನಿಲ ಬೆಲೆ ಏರಿಕೆಯ ಬರೆ ಹಾಕುವುದು ಸಮಂಜಸವೇ ಎಂಬುದು ಪ್ರಶ್ನೆ.
ಸರ್ಕಾರವೊಂದು ತನ್ನ ಜನಪ್ರಿಯತೆ ರಕ್ಷಿಸಿಕೊಳ್ಳಲೇಬೇಕು ಮತ್ತು ಜನಹಿತ ಬಯಸಬೇಕು ಎನ್ನುವುದಾದರೆ ತೈಲೋತ್ಪನ್ನಗಳ ಬೆಲೆಗಳನ್ನು ಏರಿಸುವ ಬದಲು ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿದರೆ ನಿಜವಾಗಿಯೂ ಜನರಿಗೆ ಅನುಕೂಲವಾಗುತ್ತದೆ. ನೆರೆಯ ತಮಿಳುನಾಡು ಸರ್ಕಾರ ಈ ಸಂಬಂಧ ತನ್ನ ದಿಟ್ಟತನ ಪ್ರದರ್ಶಿಸಿ ಜನತೆಗೆ ಕೊಂಚಮಟ್ಟಿಗೆ ರಿಲೀಫ್ ನೀಡಿದೆ. ಇದೇ ಸೆಪ್ಟೆಂಬರ್ 1ರಿಂದ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಲೀಟರ್ ವೊಂದಕ್ಕೆ 3 ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿದೆ. ತಮಿಳುನಾಡು ಸರ್ಕಾರಕ್ಕೆ ಇದು ಸಾಧ್ಯವಾಗುವುದಾದರೆ ಉಳಿದ ಸರ್ಕಾರಗಳಿಗೇಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ.
ಒಟ್ಟಾರೆ 2010ರಲ್ಲಿ ಅನುಕ್ರಮವಾಗಿ 70 ರೂಪಾಯಿ ಹಾಗೂ 65ರೂಪಾಯಿರಷ್ಟಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈಗ ಶೇ. 35ರಷ್ಟು ಮತ್ತು ಡೀಸೆಲ್ ಬೆಲೆ ಶೇ.55ರಷ್ಟು ಹೆಚ್ಚಾಗಿದೆ. ಅಡುಗೆ ಅನಿಲ ಬೆಲೆ ಶೇ.116ರಷ್ಟು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಶೇ.46ರಷ್ಟು ಹೆಚ್ಚಾಗಿದೆ.
ರಾಜ್ಯದಿಂದ ರಾಜ್ಯಕ್ಕೆ ತೈಲೋತ್ಪನ್ನಗಳ ಮೇಲೆ ವಿಧಿಸುವ ತೆರಿಗೆ ಪ್ರಮಾಣದಲ್ಲಿ ವ್ಯತ್ಯಾಸವಿದೆ. ರಾಜಸ್ಥಾನ ಅತಿ ಹೆಚ್ಚು ತೆರಿಗೆ ವಿಧಿಸುತ್ತಿದೆ ಇದು ಉಳಿದೆಲ್ಲಾ ಜೀವನಾವಶ್ಯಕ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಇದನ್ನರಿತು ಪ್ರಬಲ ಹೋರಾಟ ನಡೆಸಬೇಕಾದ ಪ್ರತಿಪಕ್ಷಗಳು ಕಾಟಾಚಾರಕ್ಕೆ ಎಂಬಂತೆ ಅಲ್ಲೊಂದು ಇಲ್ಲೊಂದು ಹೋರಾಟ ಮಾಡಿ ತಮ್ಮ ಬಳಲಿಕೆಯನ್ನು ಪ್ರದರ್ಶಿಸುತ್ತಿವೆ. ಇದೆಲ್ಲವನ್ನು ಮೆಟ್ಟಿ ನಿಂತು ಬದ್ಧತೆಯಿಂದ ಹೋರಾಟ ಕಟ್ಟುವ ಅನಿವಾರ್ಯತೆ ಇದೆ. ಇಲ್ಲವಾದರೆ ಒಂದಿಡಿ ಸಮಾಜ ಅಸಹಾಯಕ ಸ್ಥಿತಿಗೆ ತಲುಪುತ್ತದೆ.



