60 ಕಿಮೀ ವ್ಯಾಪ್ತಿಯಲ್ಲಿನ ಟೋಲ್ ರದ್ದು: ಗಡ್ಕರಿ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ 60 ಕಿ. ಮೀ. ವ್ಯಾಪ್ತಿಯೊಳಗೆ ಎರಡು ಟೋಲ್ ಬೂತ್‌ಗಳಿದ್ದರೆ ಅದರಲ್ಲಿ ಒಂದು ಟೋಲ್ ಬೂತನ್ನು ಮೂರು ತಿಂಗಳಿನಲ್ಲಿ ಮುಚ್ಚಲಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಲೋಕಸಭೆಯಲ್ಲಿ ರಸ್ತೆ ಮತ್ತು ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ “60 ಕಿ. ಮೀ. ವ್ಯಾಪ್ತಿಯಲ್ಲಿ ಕೇವಲ ಒಂದು ಟೋಲ್ ಬೂತ್ ಇರಬೇಕು. ಎರಡು ಟೋಲ್ ಬೂತ್ ಇರುವ ಕಡೆ ಅವುಗಳನ್ನು ಮೂರು ತಿಂಗಳಿನಲ್ಲಿ ತೆರವುಗೊಳಿಸಲಾಗುತ್ತದೆ” ಎಂದರು.
“ದೆಹಲಿ-ಅಮೃತಸರ-ಕಾತ್ರಾ ಎಕ್ಸ್‌ಪ್ರೆಸ್ ವೇ ಯೋಜನೆಯನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ. ಈ ಯೋಜನೆ ಪೂರ್ಣಗೊಂಡರೆ ಕೇವಲ ನಾಲ್ಕು ಗಂಟೆಗಳಲ್ಲಿ ಸಂಚಾರ ಮಾಡಬಹುದು. ಮುಂದಿನ ದಿನಗಳಲ್ಲಿ ಶ್ರೀನಗರ – ಜಮ್ಮು ರಸ್ತೆಯನ್ನುಕಾತ್ರಾ-ಅಮೃತಸರ-ದೆಹಲಿ ರಸ್ತೆಗೆ ಸೇರಿಸಲಾಗುತ್ತದೆ. ಇದರಿಂದಾಗಿ ಶ್ರೀನಗರ-ಮುಂಬೈ ನಡುವಿನ ಪ್ರಯಾಣದ ಅವಧಿ 20 ಗಂಟೆಗಳಿಗೆ ಇಳಿಕೆಯಾಗಲಿದೆ ಎಂದರು.
“ದೆಹಲಿ-ಜೈಪುರ, ದೆಹಲಿ-ಮುಂಬೈ, ದೆಹಲಿ-ಡೆಹ್ರಡೂನ್ ಎಕ್ಸ್‌ಪ್ರೆಸ್ ವೇಗಳನ್ನು ಈ ವರ್ಷದೊಳಗೆ ಪೂರ್ಣಗೊಳಿಸಲಾಗುತ್ತದೆ. ಜೈಪುರ-ಡೆಹ್ರಡೂನ್ ಪ್ರಯಾಣದ ಅವಧಿ 2 ಗಂಟೆಗೆ ಇಳಿಕೆಯಾಗಲಿದೆ. ದೆಹಲಿ-ಮುಂಬೈ ಪ್ರಯಾಣದ ಅವಧಿ 12 ಗಂಟೆ ಆಗಲಿದೆ” ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
