Breaking NewsLatestರಾಜ್ಯಸುದ್ದಿ
ವನ್ಯ ಪ್ರಾಣಿಗಳ ಮೃತದೇಹ ಸುಡುವುದು, ಹೂಳುವುದು ನಿಷೇಧ

ಹುಲಿಯ ಹೊರತಾಗಿ ಬೇರಾವುದೇ ವನ್ಯ ಪ್ರಾಣಿ ಹಾಗೂ ಪಕ್ಷಿಗಳ ಕಳೆಬರವನ್ನು ಹೂಳುವುದು, ಸುಡುವುದನ್ನು ನಿಷೇಧಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಕುಮಾರ್ ಗೋಗಿ ಸುತ್ತೋಲೆ ಹೊರಡಿಸಿದ್ದಾರೆ.
ವನ್ಯಜೀವಿಗಳ ಕಳೆಬರಗಳನ್ನು ಹೂಳುವುದು ಅಥವಾ ಸುಡುವುದರಿಂದ ಇತರ ವನ್ಯ ಜೀವಿಗಳ ಆಹಾರಕ್ಕೆ ಸಮಸ್ಯೆಯಾಗುತ್ತದೆ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ವರದಿ ಸಲ್ಲಿಸಿದ್ದು, ಕಳೆಬರಗಳನ್ನು ಅರಣ್ಯದಲ್ಲೇ ಕೊಳೆಯಲು ಬಿಡುವಂತೆ ಶಿಫಾರಸ್ಸು ಮಾಡಿದ್ದಾರೆ. ಅದರಂತೆ ಸುತ್ತೋಲೆ ಹೊರಡಿಸಲಾಗಿದ್ದು, ಹುಲಿ ಹೊರತು ಪಡಿಸಿ ಇತರ ಯಾವುದೇ ಪ್ರಾಣಿ, ಪಕ್ಷಿಗಳ ಕಳೆಬರವನ್ನು ಹೂಳುವುದು ಹಾಗೂ ಸುಡುವಂತಿಲ್ಲ ಎಂದಿದ್ದಾರೆ.
ಪ್ರಾಣಿಗಳ ಕಳೆಬರಗಳು ಕೆಲವೊಂದು ಪ್ರಾಣಿಗಳಿಗೆ ಕ್ಯಾಲ್ಸಿಯಂನ ಪ್ರಮುಖ ಮೂಲ. ಅವು ಕೊಳೆಯುವ ಸ್ಥಳದಲ್ಲಿ ಸಾರಜನಕ, ರಂಜಕ, ಸೋಡಿಯಂ, ಗಂಧಕ ಸೇರಿದಂತೆ ಕೆಲವೊಂದು ರಾಸಾಯನಿಕ ವಸ್ತುಗಳು ಯಥೇಚ್ಚವಾಗಿರುತ್ತದೆ. ಹೀಗಾಗಿ ಪ್ರಾಣಿಗಳ ಕಳೆಬರಗಳನ್ನು ಕೊಳೆಯಲು ಬಿಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
