Breaking NewsLatestಉತ್ತರ ಕನ್ನಡಜಿಲ್ಲಾ ಸುದ್ದಿ

ಭಾರೀ ಮಳೆ ; ಜನರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಚ್ಚರಿಕೆ

ಕಾರವಾರ : ” ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜನರು ಯಾವುದೇ ಕಾರಣಕ್ಕೂ ನಿಷೇಧಿತ ಪ್ರದೇಶದಲ್ಲಿ ಸಂಚರಿಸಬಾರದು” ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಪ್ರಮುಖ ನದಿಗಳಾದ ಅಘನಾಶಿನಿ, ಕಾಳಿ ಹಾಗೂ ಗಂಗಾವಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಿಲ್ಲೆಯಲ್ಲಿರುವ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ” ಎಂದರು.

ಅರಣ್ಯ ಪ್ರದೇಶದಲ್ಲಿರುವ ಸಣ್ಣಪುಟ್ಟ ಹೊಳೆ,ಹಳ್ಳಗಳು ತುಂಬಿ ಹರಿಯುತ್ತಿದ್ದು, ಸಾಕಷ್ಟು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.ಇದರಿಂದ ಜಿಲ್ಲೆಯ ಜನರೂ ಸಹ ಸಾಕಷ್ಟು ತೊಂದರೆಗಳಿಗೆ ಒಳಗಾಗಿದ್ದಾರೆ. ಜಲಾಶಯ ಹಾಗೂ ನದಿ ಭಾಗದಲ್ಲಿ ಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಜನರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಹೇಳಿದರು.

ಜೊತೆಗೆ ಮಳೆ ಹಾಗೂ ಪ್ರವಾಹದಿಂದ ತೊಂದರೆಯಾಗುವ ಮುನ್ಸೂಚನೆ ಇರುವಾಗಲೇ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಪ್ರವಾಹ ಮತ್ತು ಮಳೆಯಿಂದ ತೊಂದರೆಯಾದರೆ ತಕ್ಷಣ ತಹಶೀಲ್ದಾರ್, ಜಿಲ್ಲಾಡಳಿತ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಅಜಾಗರೂಕತೆಯಿಂದ ವರ್ತಿಸಬಾರದು ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಜಿಲ್ಲೆಯ ಅಂಕೋಲಾ ತಾಲೂಕಿನ 32, ಹಳಿಯಾಳ 1, ಕಾರವಾರ 27, ಕುಮಟಾ 9, ಮುಂಡಗೋಡ 1, ಸಿದ್ದಾಪುರ 5 ಹಾಗೂ ಶಿರಸಿಯ 1 ಗ್ರಾಮ ಸೇರಿದಂತೆ ಒಟ್ಟಾರೆ 79 ಗ್ರಾಮಗಳು ನದಿ ಹಾಗೂ ಜಲಾಶಯದಿಂದ ಹೊರ ಬಿಡಲಾದ ನೀರಿನಿಂದ ಉಂಟಾಗಿರುವ ಪ್ರವಾಹಕ್ಕೆ ಸಿಲುಕಿವೆ. ಜಿಲ್ಲೆಯಲ್ಲಿ ಒಟ್ಟು 11084 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೊನ್ನಾವರ ತಾಲೂಕಿನಲ್ಲಿ ಮೀನುಗಾರ ಮಹಿಳೆಯೊಬ್ಬರು ಹಾಗೂ ಶಿರಸಿ ತಾಲೂಕಿನಲ್ಲಿ ಒಬ್ಬ ವ್ಯಕ್ತಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ನದಿಯ ಪ್ರವಾಹ ಸಿಲುಕಿ ಮೃತರಾಗಿದ್ದು, ಅವರ ಮೃತದೇಹ ಪತ್ತೆಯಾಗಿವೆ. ಅಂಕೋಲಾ ತಾಲೂಕಿನಲ್ಲಿ ಇಬ್ಬರು ಕಾಣೆಯಾಗಿದ್ದು, ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಹೆಚ್ಚು

ಮಳೆ ಹಾಗೂ ನೆರೆ ಹಾವಳಿಯಿಂದ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ 1, ಕಾರವಾರ 5 ಹಾಗೂ ಯಲ್ಲಾಪುರ 3 ಸೇರಿದಂತೆ ಒಟ್ಟು 9 ಮನೆಗಳು ಪೂರ್ಣ ಹಾಗೂ 55 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಟ್ಟಾರೆಯಾಗಿ ಮಳೆ ಹಾಗೂ ಪ್ರವಾಹದಲ್ಲಿ ಸಿಲುಕಿದಂತಹ ಒಟ್ಟು 3776 ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಕಾಳಜಿ ಕೇಂದ್ರ ಸ್ಥಾಪನೆ

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗಾಗಿ ಅಂಕೋಲಾ ತಾಲೂಕಿನಲ್ಲಿ 19, ಹಳಿಯಾಳ 1, ಕಾರವಾರ 19, ಕುಮಟಾ 9, ಮುಂಡಗೋಡ 1, ಸಿದ್ದಾಪುರ 5, ಶಿರಸಿ 1 ಹಾಗೂ ಯಲ್ಲಾಪುರ 3 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 58 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಈ ಎಲ್ಲ ಕೇಂದ್ರಗಳಲ್ಲಿ ಒಟ್ಟು 3,435 ಜನರು ಆಶ್ರಯ ಪಡೆದಿದ್ದಾರೆ. ಅಲ್ಲದೇ ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ 143 ರಸ್ತೆಗಳು, 22 ಸೇತುವೆಗಳು, 7 ಶಾಲೆಗಳು, 1 ಪ್ರಾಥಮಿಕ ಆರೋಗ್ಯ ಕೇಂದ್ರ, 145 ವಿದ್ಯುತ್ ಕಂಬಗಳು, 5 ಟಿಸಿಗಳಿಗೆ ಹಾನಿಯಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button