ಕಾಂಗ್ರೆಸ್ ಸಂಪರ್ಕದಲ್ಲಿರುವ ಬಿಜೆಪಿ ನಾಯಕರ ಗುಟ್ಟು ರಟ್ಟು ಮಾಡೆವು: ಶಿವಕುಮಾರ್

ಬೆಂಗಳೂರು: ಬಿಜೆಪಿ ಹಾಗೂ ಇತರೆ ಪಕ್ಷಗಳ ನಾಯಕರು ನಮ್ಮ ಜತೆ ಸಂಪರ್ಕದಲ್ಲಿರುವ ವಿಚಾರವನ್ನು ನಾವು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬಿಜೆಪಿಯಲ್ಲೇನಾಗುತ್ತಿದೆ ಎಂಬುದರ ಬಗ್ಗೆ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಅವರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಜತೆ ಮಾತನಾಡಿರುವವರ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನನ್ನ ಬಳಿ ಯಾರು ಮಾತನಾಡುತ್ತಾರೆ ಎಂಬ ಮಾಹಿತಿಯನ್ನು ನಾನ್ಯಾಕೆ ಬಿಟ್ಟು ಕೊಡಲಿ? ಇದರಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ. ಇದು ರಾಜಕಾರಣದ ಒಂದು ಭಾಗ ಎಂದರು.
ಮೇಕೆದಾಟು ಯೋಜನೆ ಜಾರಿ
ನಾವೇ ಮೇಕೆದಾಟು ಯೋಜನೆ ಮಾಡುತ್ತೇವೆ, ಕಾಂಗ್ರೆಸ್ ನವರಿಗೆ ಅವಕಾಶ ನೀಡುವುದಿಲ್ಲ ಎಂಬ ಸಚಿವ ಸೋಮಣ್ಣ ಅವರ ಹೇಳಿಕೆ ಉತ್ತರಿಸಿದ ಶಿವಕುಮಾರ್, ಈ ವಿಚಾರದಲ್ಲಿ ತಡ ಮಾಡುವುದು ಬೇಡ. ಹೇಗಿದ್ದರೂ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಜತೆಗೆ ಬಿಜೆಪಿಯ 25 ಸಂಸದರಿದ್ದಾರೆ. ಒಂದೇ ದಿನದಲ್ಲಿ ಅನುಮತಿ ಪಡೆಯುವ ಸಾಮರ್ಥ್ಯವಿರುವ ಬಲಿಷ್ಠ ಸರ್ಕಾರವಿದೆ. ಅವರು ಈ ಕೆಲಸ ಮಾಡಲಿ ಎಂದು ಹೇಳಿದರು.
ಬೊಮ್ಮಯಿ ಪೂರ್ಣಾವಧಿ ಮುಗಿಸಲಿ
ಸಿಎಂ ಬೊಮ್ಮಯಿ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಸಂಭ್ರಮಾಚರಣೆ ಮಾಡುವುದಾದರೆ ಮಾಡಿಕೊಳ್ಳಲಿ. ಮೊದಲು ಮೇಕೆದಾಟು ಯೋಜನೆ ಜಾರಿಗೊಳಿಸಲಿ. ಅವರು 2023 ಮೇ 15 ರವರೆಗೂ ಅಧಿಕಾರದಲ್ಲಿರಲಿ. ಪೂರ್ಣವಧಿವರೆಗೂ ಸಿಎಂ ಆಗಿರಲಿ. ಅದಕ್ಕೆ ನಮ್ಮ ಯಾವುದೇ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು.
ಅವೈಜ್ಞಾನಿಕ ನಡೆ ಯಾರದು?
ಕಾಂಗ್ರೆಸ್ ನಿಂದ ಕೊರೋನಾ ನಿಯಮಗಳ ಉಲ್ಲಂಘನೆ ಆಗಿದೆ ಎಂಬ ಸಚಿವ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕೋವಿಡ್ ಸಮಯದಲ್ಲಿ ಸ್ವಿಮ್ಮಿಂಗ್ ಫೂಲ್ ಬಳಸದಂತೆ ನಿರ್ಬಂಧ ಹೇರಿದ್ದರೂ ಈಜಾಡಿದ್ದವರು ಯಾರು? ಎಂದು ಪ್ರಶ್ನಿಸಿದ ಶಿವಕುಮಾರ್, ನೈಟ್ ಕರ್ಫ್ಯೂನಿಂದ ಆಗುವ ಅನುಕೂಲವೇನು? ಕೆಲವರಿಗೆ ರಾತ್ರಿ 9 ಗಂಟೆ ಮೇಲೆ ವ್ಯಾಪಾರ ಆರಂಭವಾಗುತ್ತದೆ’ ಎಂದೂ ಹೇಳಿದರು.
224 ಕ್ಷೇತ್ರ ನಮ್ಮ ಗುರಿ:
ನಮಗೆ ಕೇವಲ ರಾಮನಗರ ಹಾಗೂ ಚನ್ನಪಟ್ಟಣ ಮಾತ್ರವಲ್ಲ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕು. ಎಲ್ಲ ಕ್ಷೇತ್ರಗಳು ನಮಗೆ ಪ್ರತಿಷ್ಠೆಯಾಗಿವೆ ಎಂದರು.
