Breaking NewsLatestರಾಷ್ಟ್ರೀಯವಿದೇಶಸುದ್ದಿ

ರಷ್ಯಾ ಹಾಗೂ ಉಕ್ರೇನ್ ನಡುವೆ ಕದನ ವಿರಾಮ ಘೋಷಿಸುವಂತೆ ಮಾಡಬೇಕಿದೆ: ನರೇಂದ್ರ ಮೋದಿ

ಬಾಲಿ: ರಷ್ಯಾ ಹಾಗೂ ಉಕ್ರೇನ್ ನಡುವೆ ಕದನ ವಿರಾಮ ಘೋಷಿಸುವಂತೆ ಮಾಡಬೇಕಿದೆ.

ಅದಕ್ಕಾಗಿ ರಾಜತಾಂತ್ರಿಕ ಮಾರ್ಗದ ಮೂಲಕ ದಾರಿ ಕಂಡುಕೊಳ್ಳಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ

ಹೇಳಿದರು. ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲ ಜತೆಯಾಗಿ ಉಕ್ರೇನ್​ನಲ್ಲಿ ಕದನ ವಿರಾಮ ಜಾರಿಗೆ ಬರುವಂತೆ ಮಾಡಬೇಕಿದೆ. ನಾನಿದನ್ನು ಹಲವು ಬಾರಿ ಹೇಳಿದ್ದೇನೆ, ಇದೀಗ ಪುನರುಚ್ಚರಿಸುತ್ತಿದ್ದೇನೆ ಎಂದು ಕರೆ ನೀಡಿದರು.

ಜಗತ್ತು ಕೋವಿಡ್ ಸಾಂಕ್ರಾಮಿಕದ ನಂತರದ ಹಂತಕ್ಕೆ ಬಂದಿದೆ. ನಾವೀಗ ವಿಶ್ವದಲ್ಲಿ ಶಾಂತಿ, ಸಾಮರಸ್ಯ ನೆಲೆಸುವಂತೆ ಮಾಡಬೇಕಿದೆ. ಜನರಿಗೆ ಭದ್ರತೆ ಮತ್ತು ಸುರಕ್ಷಿತ ವಾತಾವರಣ ನಿರ್ಮಿಸಬೇಕಿದೆ. ವಿಶ್ವಕ್ಕೆ ಶಾಂತಿ ಸಂದೇಶ ನೀಡೋಣ ಎಂದು ಮೋದಿ ಕರೆ ನೀಡಿದರು.

‘ಪೂರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳೋಣ’

ಇಂದಿನ ರಸಗೊಬ್ಬರ ಕೊರತೆಯೇ ನಾಳಿನ ಆಹಾರ ಬಿಕ್ಕಟ್ಟಿಗೆ ದಾರಿ. ಇದಕ್ಕೆ ಜಗತ್ತು ಇನ್ನೂ ಪರಿಹಾರ ಕಂಡುಕೊಂಡಿಲ್ಲ. ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ನಾವೆಲ್ಲ ಜತೆಯಾಗಿ ಕಾರ್ಯನಿರ್ವಹಿಸಬೇಕಿದೆ. ಭಾರತದಲ್ಲಿ ಆಹಾರ ಭದ್ರತೆಗಾಗಿ ನಾವು ನೈಸರ್ಗಿಕ ಕೃಷಿ, ಪೌಷ್ಟಿಕಾಂಶಯುಕ್ತ ಆಹಾರ ಬೆಳೆಗಳು, ರಾಗಿಯಂಥ ಸಾಂಪ್ರದಾಯಿಕ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ರಾಗಿಯಿಂದ ಜಾಗತಿಕ ಮಟ್ಟದಲ್ಲಿ ಅಪೌಷ್ಟಿಕತೆ ಹಾಗೂ ಹಸಿವನ್ನು ಹೋಗಲಾಡಿಸಲು ಸಾಧ್ಯವಿದೆ ಎಂದು ಮೋದಿ ಹೇಳಿದರು.

ಜಾಗತಿಕ ಆರ್ಥಿಕ ಬೆಳವಣಿಗೆಗೆ ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತದ ಇಂಧನ ಭದ್ರತೆ ಕೂಡ ಬಹು ಮುಖ್ಯ. ಇಂಧನ ಮಾರುಕಟ್ಟೆಯ ಪೂರೈಕೆ ಮೇಲಿನ ನಿರ್ಬಂಧಗಳನ್ನು ನಾವು ಪ್ರೋತ್ಸಾಹಿಸಬಾರದು. ಶುದ್ಧ ಇಂಧನ ಮತ್ತು ಪರಿಸರದ ವಿಚಾರದಲ್ಲಿ ಭಾರತ ಬದ್ಧವಾಗಿದೆ ಎಂದು ಅವರು ಹೇಳಿದರು.

2030ರ ವೇಳೆಗೆ ನಾವು ಬಳಸುವ ಶೇಕಡಾ 50ರಷ್ಟು ವಿದ್ಯುತ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ತಯಾರಾಗಲಿದೆ. ಇಂಧನ ಪರಿವರ್ತನೆಗಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಮಯಕ್ಕೆ ಸರಿಯಾಗಿ ಉತ್ತಮ ತಂತ್ರಜ್ಞಾನ ಮತ್ತು ಹಣಕಾಸಿನ ಲಭ್ಯತೆ ಸಿಗಬೇಕಾದ್ದು ಅತೀ ಅಗತ್ಯ ಎಂದು ಮೋದಿ ಪ್ರತಿಪಾದಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button