ಮೇಕೆದಾಟು ಪಾದಯಾತ್ರೆ ಬದಲು ನೀರಿಗಾಗಿ ನಡಿಗೆ: ಕಠಿಣ ನಿಯಮಕ್ಕೆ ಕಾಂಗ್ರೆಸ್ ಸೆಡ್ಡು

Walk for Water : ಬೆಂಗಳೂರು: ಕೋವಿಡ್ ನಿಯಂತ್ರಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವ ಸರ್ಕಾರದ ನಿರ್ಧಾರಕ್ಕೆ ಪ್ರದೇಶ ಕಾಂಗ್ರೆಸ್ ಸೆಡ್ಡು ಹೊಡೆದಿದೆ. ರಾಜಕೀಯಕ್ಕಾಗಿ ಬಿಜೆಪಿ ಸರ್ಕಾರ ರ್ಯಾಲಿ ಮಾಡಬೇಡಿ ಎಂದಿದೆ. ನಾವು ರ್ಯಾಲಿ ಮಾಡಲ್ಲ. ಆದರೆ ನೀರಿಗಾಗಿ ನಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ರಾಜಕಾರಣ ಮಾಡಲು ಕಠಿಣವಾಗುತ್ತಿದೆ. ಜನರು ಅವರಿಗೆ ಕಠಿಣ ಉತ್ತರ ನೀಡುತ್ತಿದ್ದಾರೆ. ಹೀಗಾಗಿ, ರಾಜಕಾರಣಕ್ಕಾಗಿ ಅವರು ಕಠಿಣ ನಿಯಮ ಜಾರಿಗೊಳಿಸಿದ್ದಾರೆ. ಇದು ಕೋವಿಡ್ ಲಾಕ್ ಡೌನ್ ಅಥವಾ ಕೋವಿಡ್ ಕರ್ಫ್ಯೂ ಅಲ್ಲ, ಬದಲಿಗೆ ಬಿಜೆಪಿ ಲಾಕ್ ಡೌನ್, ಬಿಜೆಪಿ ಕರ್ಫ್ಯೂ ಎಂದರು.
ರಾಜಕೀಯ ತಿರುವು
ನಮ್ಮ ಮೇಲಿನ ರಾಜಕೀಯ ದ್ವೇಷಕ್ಕಾಗಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ನನ್ನ ಮೇಲೆ, ನಮ್ಮ ಪಕ್ಷದ ಶಾಸಕರ ಮೇಲೆ ಮೊಕದ್ದಮೆ ಹೂಡಲಾಗಿದೆ. ವರ್ತಕರು ಮತ್ತು ಬೀದಿ ವ್ಯಾಪಾರಿಗಳಿಗೆ ತೊಂದರೆ ಕೊಡಲು ಹೊರಟಿದ್ದಾರೆ. ಇವರು ಮನುಷ್ಯರಾ? ಜನಾರ್ಶಿವಾದ ಯಾತ್ರೆ ಮಾಡಿದ ಬಿಜೆಪಿಯವರ ಮೇಲೆ ಕೇಸ್ ಹಾಕಲಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೋವಿಡ್ ವೇಳೆ, ಈಜುಕೊಳದಲ್ಲಿ ಈಜಿದರಲ್ಲಾ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಸಭೆ-ಸಮಾರಂಭಗಳಲ್ಲಿ ಭಾಗವಹಿಸಿದವರ ಮೇಲೆ ಕೇಸ್ ಹಾಕಲಿ ಎಂದು ಶಿವಕುಮಾರ್ ಸವಾಲು ಹಾಕಿದರು.
ಪಾದಯಾತ್ರೆ ನಿಲ್ಲಲ್ಲ: ಸಿದ್ದರಾಮಯ್ಯ
ಈ ನಡುವೆ ಸರ್ಕಾರದ ಕಠಿಣ ನಿಯಮ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಉದ್ದೇಶಿತ ಮೇಕದಾಟು ಪಾದಯಾತ್ರೆ ನಿಲ್ಲಿಸುವುದಿಲ್ಲ. ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
