Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಉತ್ತರಪ್ರದೇಶ: ಮೊದಲ ಹಂತದ ಚುನಾವಣೆ 11 ಗಂಟೆವರೆಗೆ ಶೇ.20ರಷ್ಟು ಮತದಾನ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮೊದಲ ಹಂತದ ಮತದಾನ ಪ್ರಗತಿಯಲ್ಲಿದೆ. ಈ ಹಂತದಲ್ಲಿ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಅಪರಾಹ್ನ 11 ಗಂಟೆವರೆಗೆ ಶೇ.20 ಮತದಾನ ಶಾಂತಿಯುತವಾಗಿ ನಡೆದಿದೆ. ಮೊದಲ ಹಂತದಲ್ಲಿ 73 ಮಹಿಳೆಯರೂ ಸೇರಿದಂತೆ ಒಟ್ಟು 623 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ 2 ಕೋಟಿ 28 ಲಕ್ಷ ಮತದಾರರು ಮತದಾನ ಮಾಡುವ ನಿರೀಕ್ಷೆ ಇದೆ. ಇವರಲ್ಲಿ 1.24 ಕೋಟಿ ಪುರುಷರು, 1.04 ಕೋಟಿ ಮಹಿಳೆಯರು ಮತ್ತು 1,448 ತೃತೀಯಲಿಂಗಿ ಮತದಾರರು ಸೇರಿದ್ದಾರೆ.

ರಾಜ್ಯದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಗುರುವಾರ ರಾಜ್ಯದಲ್ಲಿ ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ಕೋವಿಡ್ ಸುರಕ್ಷಿತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಸೌಲಭ್ಯ ಹಾಗೂ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಶಾಮ್ಲಿ(ಪ್ರಬುದ್ಧ ನಗರ) ಮೀರಠ್, ಹಾಪೂರ್(ಪಂಚಶೀಲ್ ನಗರ) ಮುಜಾಫರನಗರ, ಭಾಗ್ ಪತೆ, ಗಾಜಿಯಾಬಾದ್ , ಬುಲಂದ್ ಶಹರ್, ಅಲಿಗಢ, ಆಗ್ರಾ, ಗೌತಮ್ ಬುದ್ಧನಗರ ಮತ್ತು ಮಥುರಾ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಂದು ಮತದಾನ ನಡೆಯುತ್ತಿರುವ 58 ವಿಧಾನಸಭೆ ಕ್ಷೇತ್ರಗಳ ಪೈಕಿ, ಬಿಜೆಪಿ 53 ಸ್ಥಾನಗಳನ್ನು, ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷವೂ ತಲಾ ಎರಡು ಸ್ಥಾನಗಳನ್ನು ಮಾತ್ರ ಗಳಿಸಿದ್ದವು. ಉಳಿದ ಒಂದು ಸ್ಥಾನ ರಾಷ್ಟ್ರೀಯ ಲೋಕದಳಕ್ಕೆ ಬಂದಿತ್ತು.

ಪ್ರಸಕ್ತ ಬದಲಾದ ಸನ್ನಿವೇಶದಲ್ಲಿ ಸಹಜವಾಗಿಯೇ ಸ್ಥಾನಗಳು ಸಹಜವಾಗಿಯೇ ಬದಲಾಗುವ ಸಾಧ್ಯತೆ ಇದೆ. ಕಣದಲ್ಲಿರುವ ರಾಜಕೀಯ ಪಕ್ಷಗಳು ಭರ್ಜರಿ ಚುನಾವಣೆ ಪ್ರಚಾರ ನಡೆಸಿದ್ದವು. ಕೋವಿಡ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ಪಕ್ಷಗಳ ಸ್ಟಾರ್ ಪ್ರಚಾರಕರು ವರ್ಚುವೆಲ್ ಪ್ರಚಾರಕ್ಕೆ ಮೊರೆ ಹೋಗಿದ್ದವು.

ಆಡಳಿತರೂಢ ಬಿಜೆಪಿ, ಅನುಪ್ರಿಯಾ ಪಟೇಲ್ ನೇತೃಥ್ವದ ಅಪ್ನಾದಳ್(ಸೋನೆಲಾಲ್) ಸಂಜಯ್ ನಿಶಾದ್ ನೇತೃತ್ವದ ನಿಶಾದ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸಮಾಜವಾದಿ ಪಕ್ಷವು ರಾಷ್ಟ್ರೀಯ ಲೋಕದಶ, ಶಿವಪಾಲ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷ(ಲೋಹಿಯಾ), ಓಂ ಪ್ರಕಾಶ್ ರಾಜ್ ಭರ್ ನೇತೃತ್ವದ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷ, ಕೃಷ್ಣ ಪಟೇಲ್ ನೇತೃತ್ವದ ಜನವಾದಿ ಪಕ್ಷ(ಸಮಾಜವಾದಿ) ಮತ್ತು ಅಪ್ನಾದಳ(ಕಾಮರವಾಡಿ) ಜತೆಗೆ ಮೈತ್ರಿ ಮಾಡಿಕೊಂಡಿದೆ.

ಮಹಾನ್ ದಳ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಮಾಜವಾದಿ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಆದರೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸದಿರಲು ನಿರ್ಧರಿಸಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button