ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ

ಚಿಕ್ಕಮಗಳೂರು: ಹಲವು ದಿನಗಳಿಂದ ವಿದ್ಯುತ್ ಅಭಾವ ಉಂಟಾಗಿ ಗ್ರಾಮಸ್ಥರಿಗೆ ತೀವ್ರ ಅನಾನುಕೂಲವಾಗಿದ್ದು,ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ ಕಳಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಪಂ ಕಚೇರಿಯಿಂದ ಮೆಸ್ಕಾಂ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ವಿದ್ಯುತ್ ಸಮಸ್ಯೆ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರಾತ್ರಿ 2ರಿಂದ ಬೆಳಗಿನ ಜಾವ 4 ಗಂಟೆವರೆಗೆ ಮಾತ್ರ ವಿದ್ಯುತ್ ಸರಬರಾಜಾಗುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಗ್ರಾಮದಲ್ಲಿ ನಾಡಕಚೇರಿ, ಭಾರತೀಯ ಅಂಚೆ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬಿಎಸ್ಎನ್ಎಲ್ ಕಚೇರಿ, ಹಾಲಿನ ಡೇರಿ ಸಹಿತ ಅನೇಕ ಇಲಾಖೆಗಳನ್ನು ಹೊಂದಿದ್ದು ಸಣ್ಣಪುಟ್ಟ ಕೆಲಸಗಳಿಗೂ ಗಂಟೆಗಟ್ಟಲೆ ಕಾಯಬೇಕಾದ ದುಸ್ಥಿತಿ ಎದುರಾಗಿದೆ ದೂರಿದರು
ಗ್ರಾಪಂ ಅಧ್ಯಕ್ಷೆ ಮಂಜುಳಾ ಮಾತನಾಡಿ, ಕಳಸಾಪುರ ನಾಡಕಚೇರಿಗೆ ಸುಮಾರು 60ಕ್ಕೂ ಹೆಚ್ಚು ಗ್ರಾಮಗಳು ಒಳಗೊಂಡಿದ್ದು, ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಸವಲತ್ತುಗಳನ್ನು ಪಡೆಯಲು ವಿದ್ಯುತ್ ಸಮಸ್ಯೆಯಿಂದಾಗಿ ಇಂಟರ್ನೆಟ್ ಅಭಾವ ಉಂಟಾಗಿ ವಾಪಸಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಲಾ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಗೆ ತೊಂದರೆಯಾಗುತ್ತಿದೆಯಲ್ಲದೆ ಬಿಸಿಯೂಟಕ್ಕೆ, ವಸತಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
