ಎರಡನೇ ಸಲ ಅಪಘಾತಕ್ಕೆ ಒಳಗಾದ ವಂದೇ ಭಾರತ್ ಎಕ್ಸ್ಪ್ರೆಸ್!

ಗುಜರಾತ್: ವಾರದ ಹಿಂದಷ್ಟೇ ಆರಂಭಗೊಂಡಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಅಷ್ಟರಲ್ಲೇ ಎರಡು ಸಲ ಅವಘಡಕ್ಕೆ ಒಳಗಾಗಿದೆ. ಅದೃಷ್ಟವಶಾತ್ ಅಂಥ ಯಾವುದೇ ತೊಂದರೆ ಆಗದೆ, ಸಣ್ಣಪುಟ್ಟ ಸಮಸ್ಯೆಗಳೊಂದಿಗೆ ಪಾರಾಗಿದೆ.
ಗುಜರಾತ್ ಮತ್ತು ಮುಂಬೈ ಸೆಂಟ್ರಲ್ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅ.6ರಂದು ಬೆಳಗ್ಗೆ 11.15ರ ಸುಮಾರಿಗೆ ಅಪಘಾತಕ್ಕೀಡಾಗಿತ್ತು.
ಎಮ್ಮೆಗಳ ಹಿಂಡು ರೈಲ್ವೇ ಹಳಿಯ ಮೇಲೆ ಅಡ್ಡ ಬಂದುದರಿಂದ ಈ ಅಪಘಾತ ಸಂಭವಿಸಿತ್ತು.
ರೈಲು ಅತಿವೇಗದಲ್ಲಿ ಇಲ್ಲದ್ದರಿಂದ ದೊಡ್ಡಮಟ್ಟದ ಹಾನಿಯಾಗಿರಲಿಲ್ಲ. ರೈಲಿನ ಮುಂಭಾಕ್ಕೆ ಮಾತ್ರ ಹಾನಿಯಾಗಿತ್ತು. ಆ ಭಾಗವನ್ನು ಮುಂಬೈ ಸೆಂಟ್ರಲ್ ಡಿಪೋದಲ್ಲಿ ಸರಿಪಡಿಸಿ, ಅಪಘಾತವಾದ 24 ಗಂಟೆಯಲ್ಲಿ ಸಂಚಾರಕ್ಕೆ ಸಿದ್ಧವಾಗಿತ್ತು. ಆದರೆ ಮತ್ತೆ ಪುನಃ ಅಂಥದ್ದೇ ಅವಘಡಕ್ಕೆ ಒಳಗಾಗಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಶುಕ್ರವಾರ ಗುಜರಾತ್ನ ಆನಂದ್ ಸ್ಟೇಷನ್ ಬಳಿ ದನಕ್ಕೆ ಡಿಕ್ಕಿ ಹೊಡೆದಿದೆ. ಈ ರೈಲಿನ ಮೂತಿಗೆ ಸಣ್ಣ ಹಾನಿ ಆಗಿದ್ದು, ದೊಡ್ಡ ಸಮಸ್ಯೆ ಏನೂ ಆಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ಸೆ.30ರಂದು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದ್ದರು. ಈ ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಜತೆಗೆ ಸುಧಾರಿತ ವೇಗವರ್ಧನೆ ಹಾಗೂ ಬ್ರೇಕಿಂಗ್ ಸಾಮರ್ಥ್ಯವನ್ನೂ ಒಳಗೊಂಡಿದೆ.
