ಮತ್ತೆ ಸಿಎಂ ಆಗುವ ಅಖಿಲೇಶ್ ಯಾದವ್ ಕನಸಿಗೆ ತಣ್ಣೀರೆರಚಿದ ಯೋಗಿ

ಲಖನೌ: ದೇಶದ ಅತೀ ದೊಡ್ಡ ರಾಜ್ಯ ಎಂದೇ ಖ್ಯಾತಿಗಳಿಸಿರುವ ಉತ್ತರಪ್ರದೇಶದಲ್ಲಿ ಮತ್ತೆ ಸಿಎಂ ಆಗುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರ ಕನಸಿಗೆ ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಡ್ಡಿಯಾಗಿದೆ.
ಗುರುವಾರ ಆರಂಭವಾದ ಉತ್ತರ ಪ್ರದೇಶ ಚುನಾವಣೆಯ ಮತಎಣಿಕೆ ಕಾರ್ಯ ಮೂರನೇ ಗಂಟೆಗೆ ಪ್ರವೇಶ ಮಾಡಿದ್ದು, ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 252 ಸ್ಥಾನಗಳಲ್ಲಿ ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮುನ್ನಡೆ ಸಾಧಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಇನ್ನು 2ನೇ ಅತೀ ದೊಡ್ಡ ಪಕ್ಷವಾಗಿ ಸಮಾಜವಾದಿ ಪಕ್ಷ ಇದ್ದು ಈ ವರೆಗಿನ ಫಲಿತಾಂಶದಲ್ಲಿ ಎಸ್ ಪಿ ಪಕ್ಷ 112 ಸ್ಥಾನಗಳಲ್ಲಷ್ಟೇ ಮುನ್ನಡೇ ಕಾಯ್ದುಕೊಂಡಿದೆ.
ಇನ್ನು ಒಟ್ಟು 403 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಬಹುಮತದತ್ತ ಸಾಗಿದ್ದು, ಆ ಮೂಲಕ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಸತತ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಮೊದಲ ಪಕ್ಷ ಎಂಬ ಕೀರ್ತಿಗೆ ಬಿಜೆಪಿ ಭಾಜನವಾಗಲಿದೆ.
