Breaking NewsLatestಮೆಟ್ರೋರಾಜ್ಯರಾಷ್ಟ್ರೀಯವಾಣಿಜ್ಯಸುದ್ದಿ

ಬಜೆಟ್​ ದೇಶದ ಮುಂದಿನ 25 ವರ್ಷಗಳ ಮಾರ್ಗದರ್ಶಿಯಾಗಿರಲಿದೆ: ನಿರ್ಮಲ ಸೀತಾರಾಮನ್

ನವದೆಹಲಿ: ಪ್ರಸಕ್ತ ಸಾಲಿನ 2022-23ನೇ ಸಾಲಿನ ಬಜೆಟ್ಟನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸುತ್ತಿದ್ದಾರೆ. ಕೊರೋನಾ ಸಾಂಕ್ರಾಮಿ ರೋಗ ಹಿನ್ನೆಲೆ ತೀವ್ರ ಆರ್ಥಿಕ ಸಂಕಷ್ಟ, ನಿರುದ್ಯೋಗ ಹೆಚ್ಚಳ, ಕೃಷಿ ಉದ್ಯಮ, ರಫ್ತು, ವಾಹನೋದ್ಯಮ ಸೇರಿದಂತೆ ಪ್ರತಿಯೊಂದು ವಲಯವೂ ಋಣಾತ್ಮಕ ಬೆಳವಣಿಗೆ ದಾಖಲಿಸಿದ್ದು, ಸಾಲು ಸಾಲು ಸವಾಲುಗಳ ನಡುವಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ನಾವು ಒಮಿಕ್ರಾನ್ ಅಲೆಯ ಮಧ್ಯೆ ಇದ್ದೇವೆ. ನಮ್ಮ ಲಸಿಕಾ ಅಭಿಯಾನದ ವೇಗವು ಹೆಚ್ಚು ಸಹಾಯ ಮಾಡಿದೆ. ಸಬ್ ಕಾ ಪ್ರಯಾಸ್, ನಾವು ಬಲವಾದ ಬೆಳವಣಿಗೆಯೊಂದಿಗೆ ಮುಂದುವರಿಯುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ. 2021-22ರ ಬಜೆಟ್ ನಲ್ಲಿ ಸಾರ್ವಜನಿಕ ಹೂಡಿಕೆ ಮತ್ತು ಬಂಡವಾಳ ವೆಚ್ಚದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಪ್ರಸಕ್ತ ಸಾಲಿನ (2022-23) ಬಜೆಟ್ ಯುವಜನರು, ಮಹಿಳೆಯರು, ರೈತರು ಪರಿಶಿಷ್ಟಜಾತಿ ಮತ್ತು ಪಂಗಡ, ಪ್ರಧಾನ ಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ನ ದಿಕ್ಸೂಚಿಯಾಗಲಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಸರ್ಕಾರವು ಆಜಾದಿ ಕಾ ಅಮೃತ್ ಮಹೋತ್ಸವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಮ್ಮ ಸರ್ಕಾರವು ದೇಶದ ಆರ್ಥಿಕ ಅಭಿವೃದ್ಧಿ ಹಲವು ಕ್ರಮಗಳನ್ನು ಕೈಗೊಂಡಿದೆ. ಮಧ್ಯಮ ವರ್ಗಕ್ಕೆ ಅಗತ್ಯ ಸವಲತ್ತು ಒದಗಿಸಲು ಯತ್ನಿಸುತ್ತಿದೆ ಎಂದು ಹೇಳಿದರು. 

ನಾನು ಇಂದು ಮಂಡಿಸುತ್ತಿರುವ ನಮ್ಮ ಸರ್ಕಾರದ ಬಜೆಟ್​ ದೇಶದ ಮುಂದಿನ 25 ವರ್ಷಗಳ ಮಾರ್ಗದರ್ಶಿಯಾಗಿರಲಿದೆ. ಭಾರತವು ಸ್ವಾತಂತ್ರ್ಯ ಪಡೆದು 100 ವರ್ಷಗಳಾಗುವ ಹೊತ್ತಿಗೆ ಯಾವ ಸ್ಥಿತಿಯಲ್ಲಿ ಇರಬೇಕು ಎನ್ನುವುದನ್ನು ಈ ಬಜೆಟ್​ ಕೈದೀವಿಗೆಯಾಗಿ ಮಾರ್ಗದರ್ಶನ ಮಾಡಲಿದೆ. ನಮ್ಮ ಕನಸುಗಳನ್ನು ಪ್ರತಿಬಿಂಬಿಸುತ್ತದೆ ಎಂದರು.

2022ರಲ್ಲಿ ಆರ್ಥಿಕತೆ ಶೇ.9.2ರಷ್ಟು ಬೆಳವಣಿಗೆಯಾಗಲಿದೆ. ಎಲ್ಲ ಅವಕಾಶ ಬಳಸಿಕೊಂಡು ಬಡವರಿಗೆ ಸಹಾಯ ಮಾಡಲಾಗುವುದು. ಕಳೆದ ವರ್ಷದ ಬಜೆಟ್ ಘೋಷಣೆಯಿಂದ ಪ್ರಗತಿಯಾಗಿದೆ. ಸದ್ಯದಲ್ಲೇ ಎಲ್‌ಐಸಿಯಿಂದ ಐಪಿಒ ಬಿಡುಗಡೆ ಮಾಡಲಾಗುವುದು. ಮುಂದಿನ 25 ವರ್ಷ ಗುರಿಯಾಗಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ 60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಮಾತನಾಡಿದ ಸಚಿವೆ ನಿರ್ಮಲಾ, 14 ಕ್ಷೇತ್ರಗಳ ಪಿಎಲ್‌ಐಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಧಾನ ಮಂತ್ರಿ ಗತಿಶಕ್ತಿ ಮಾಸ್ಟರ್​ ಪ್ಲಾನ್ ಮೂಲಕ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್​ಲೈನ್ ರೂಪುರೇಷೆ ಮೂಲಕ ದೇಶದ ಭವಿಷ್ಯ ಅವಶ್ಯಕತೆಗಳನ್ನು ಅರಿತುಕೊಳ್ಳಲು ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. 

ಬಜೆಟ್ ಮಂಡನೆಗೂ ಮುನ್ನ ಇಂದು ಬೆಳಿಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತಮ್ಮ ತಂಡದೊಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ಬಳಿಕ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಇಲಾಖೆ ರಾಜ್ಯ ಸಚಿವರಾದ ಪಂಕಜ್ ಚೌಧರಿ ಮತ್ತು ಭಾಗವತ್ ಕರದ್ ಅವರು ಅಲ್ಲಿಂದ ಸಂಪುಟ ಸಭೆಗೆ ತೆರಳಿ ಬಜೆಟ್ ಗೆ ಅನುಮೋದನೆ ಪಡೆದರು.

Spread the love

Related Articles

Leave a Reply

Your email address will not be published. Required fields are marked *

Back to top button