ವಂದೇ ಭಾರತ್ ರೈಲಿನಲ್ಲಿ ವಂದೇ ಮಾತರಂ ನುಡಿಸಿದ ಯುವಕ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನ.11ರಂದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲನ್ನು ಲೋಕಾರ್ಪಣೆ ಮಾಡಿದ್ದರು. ಈ ರೈಲು ಚೆನ್ನೈ – ಮೈಸೂರು ನಡುವೆ ಸಂಚರಿಸಲಿದೆ. ಇದೀಗ ವಂದೇ ಭಾರತ್ ರೈಲಿನ ಪ್ರಯಾಣದ ವೇಳೆ ಬೆಂಗಳೂರಿನ ವಿದ್ಯಾರ್ಥಿಯೊಬ್ಬ, ವಂದೇ ಭಾರತ ಮಾತರಂ ಹಾಡಿನ್ನು ಕೊಳಲಿನ ಮೂಲಕ ನುಡಿಸಿದ್ದಾನೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದ್ವಿತೀಯ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಅಪ್ರಮೇಯ ಶೇಷಾದ್ರಿ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ, ಕೊಳಲು ನುಡಿಸಿದ ವಿದ್ಯಾರ್ಥಿ. ಇದೀಗ ಈ ವಿಡಿಯೋವನ್ನು ರೈಲ್ವೇ ಅಧಿಕಾರಿ ಅನಂತ್ ರೂಪನಗುಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೇ ಅದ್ಭುತವಾಗಿ ಕೊಳಲಿನ ಮೂಲಕ ವಂದೇ ಭಾರತ ಮಾತರಂ ಹಾಡನ್ನು ನುಡಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಟ್ವಿಟರ್ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿದ ಅನೇಕರು, ಅಪ್ರಮೇಯನ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಕೊಳಲು ನುಡಿಸುವ ವೇಳೆ ರೈಲಿನಲ್ಲಿದ್ದ ಸಹಪ್ರಯಾಣಿಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್ ಎಕ್ಸ್ಪ್ರೆಸ್ ರೈಲು’ ಹಾಗೂ ‘ಭಾರತ್ ಗೌರವ್ ಕಾಶಿ ದರ್ಶನ್’ ರೈಲುಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದರು.
