ರಾಷ್ಟ್ರಪತಿ ಹುದ್ದೆ ದಕ್ಕಿಸಿಕೊಳ್ಳಲು ಪಕ್ಷಗಳ ಕಸರತ್ತು

ಹೊಸದಿಲ್ಲಿ: ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಈಗಿನಿಂದಲೇ ಭರದ ಸಿದ್ಧತೆ ಶುರುವಾಗಿದೆ. ಗೆಲ್ಲಲೇಬೇಕೆಂದು ಪಣತೊಟ್ಟಿರುವ ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಪಠಿಸಲಾರಂಭಿಸಿವೆ. ಈ ನಡುವೆಯೇ ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಮತ್ತು ನವೀನ್ ಪಟ್ನಾಯಕ್ ಅವರ ಬಿಜೆಡಿ ಭಿನ್ನ ರಾಗ ಆರಂಭಿಸಿವೆ.
ರಾಷ್ಟ್ರಪತಿ ಹುದ್ದೆ ಪ್ರತಿಷ್ಠೆಯ ಸಂಕೇತ. ಯಾವುದೇ ಬೆಲೆ ತೆತ್ತಾದರೂ ಆ ಹುದ್ದೆ ದಕ್ಕಿಸಿಕೊಳ್ಳಬೇಕೆಂದು ಎಲ್ಲಾ ಪಕ್ಷಗಳು ಕಸರತ್ತು ನಡೆಸುತ್ತವೆ. ಆದರೆ ಈಗಿರುವ ಸನ್ನಿವೇಶದಲ್ಲಿ ಆಡಳಿತಾರೂಢ ಬಿಜೆಪಿ ಪ್ರಾಬಲ್ಯವೇ ಮೇಲುಗೈ ಸಾಧಿಸಲಿದೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯನ್ನು ಸೋಲಿಸುವುದು ಅಸಾಧ್ಯ ಎಂಬಂತಹ ಸ್ಥಿತಿಯೂ ಇಲ್ಲ. ಎನ್‌ಡಿಎ ಯೇತರ ಪಕ್ಷಗಳೆಲ್ಲವೂ ಒಗ್ಗೂಡಿದರೆ ಎನ್‌ಡಿಎಯಿಂದ ಗೆಲುವು ಕಸಿದುಕೊಳ್ಳಬಹುದು. ಹೀಗಾಗಿ ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳು ಸಮಾನ ಮನಸ್ಕ ಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ ಆರಂಭಿಸಿವೆ.
ಆದರೆ, ಚುನಾವಣೆಗೆ ಎರಡು ತಿಂಗಳು ಇರುವಾಗಲೇ ಬಿಜೆಡಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿವೆ. ‘ಯಾವುದೇ ಮೈತ್ರಿಕೂಟದ ಸಹವಾಸ ತಮಗೆ ಬೇಡ’ ಎಂದು ಎರಡೂ ಪಕ್ಷಗಳು ಹೇಳಿವೆ. ‘ರಾಷ್ಟ್ರಪತಿ ಆಯ್ಕೆ ವಿಷಯದಲ್ಲಿ ನಾವು ಯಾರ ಪರವೂ ವಹಿಸುವುದಿಲ್ಲ. ಬಿಜೆಪಿಯೂ ಬೇಡ, ಕಾಂಗ್ರೆಸ್ಸೂ ಬೇಡ. ಇಬ್ಬರಿಂದಲೂ ನಮ್ಮದು ಸಮಾನ ಅಂತರ’ ಎಂದು ಹೇಳಿವೆ. ಇದರಿಂದ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿದಂತಾಗಿದೆ.
ಈ ಎರಡರಲ್ಲಿ ಒಂದು ಪಕ್ಷ ತಮ್ಮ ಪರ ನಿಂತರೂ ರಾಷ್ಟ್ರಪತಿ ಚುನಾವಣೆ ಗೆದ್ದಂತೆಯೇ ಎನ್ನುವುದು ಬಿಜೆಪಿಗೆ ಗೊತ್ತಿದೆ. ಆದ್ದರಿಂದ ಬಿಜೆಪಿ ಈಗಲೂ ತಣ್ಣಗಿದೆ. ಪ್ರತಿಪಕ್ಷಗಳು ಮಾತ್ರ ಒಗ್ಗೂಡಿಕೆಯ ಕಸರತ್ತು ನಡೆಸಿವೆ. ಕೆಲವು ಪ್ರಮುಖ ಪ್ರತಿಪಕ್ಷ ಮುಖಂಡರು ಪರಸ್ಪರ ಭೇಟಿಯಾಗಿ, ಮೊದಲ ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಅದರಿಂದ ಯಾವುದೇ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ.
