ಬಿಜೆಪಿಯಲ್ಲಿ ಹಲವು ಮಹತ್ತರ ಬದಲಾವಣೆಯ ಸುಳಿವು: ಬೆಂಗಳೂರಿಗೆ ಆಗಮಿಸುತ್ತಿರುವ ಅಮಿತ್ ಶಾ

ಬೆಂಗಳೂರು: ಇಂದು ಮೇ 2 ಸೋಮವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್-ಮೇಯಲ್ಲಿ ವಿಧಾನಸಭೆ ಚುನಾವಣೆಯಿದ್ದು ಈ ಹೊತ್ತಿನಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ, ಬಿಜೆಪಿಯಲ್ಲಿ ಹಲವು ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಯಿದೆ. ಈ ಸುಳಿವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಸ್ ಸಂತೋಷ್ ನೀಡಿದ್ದಾರೆ.
ಅಮಿತ್ ಶಾ ಭೇಟಿ ಸಹಜ ಎಂದು ಹೇಳಲಾಗುತ್ತಿದೆ. ಖೇಲೋ ಇಂಡಿಯಾದ ಸಮಾರೋಪ ಸಮಾರಂಭದಲ್ಲಿ ನಾಳೆ ಭಾಗವಹಿಸಲಿದ್ದು, ಬಸವ ಜಯಂತಿ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಲಿದ್ದಾರೆ. ಆದರೆ ಅವರು ಬರುವುದು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಮುಖ ಬದಲಾವಣೆ ಮಾಡಲು ಎಂಬುದು ಇಲ್ಲಿ ವಿಶೇಷ. ದೀರ್ಘ ಸಮಯದಿಂದ ವಿಳಂಬವಾಗಿಕೊಂಡು ಬಂದಿರುವ ಸಚಿವ ಸಂಪುಟ ಪುನಾರಚನೆ ಮತ್ತು ಪಕ್ಷದ ಸ್ಥಿತಿಗತಿ ಇಲ್ಲಿ ಮುಖ್ಯವಾಗಿದೆ.
ಬೊಮ್ಮಾಯಿಯವರು ತಮ್ಮ ಅಧಿಕೃತ ನಿವಾಸದಲ್ಲಿ ಅಮಿತ್ ಶಾ ಅವರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಿದ್ದಾರೆ.
ಚುನಾವಣೆಗೆ ಇನ್ನು ಒಂದು ವರ್ಷವೂ ಇಲ್ಲದಿರುವುದರಿಂದ ಈ ಬಾರಿ ಶಾ ಅವರ ಭೇಟಿ ನಿರ್ಣಾಯಕವಾಗಲಿದೆ. ಅನೇಕ ಹೊಸ ಮುಖಗಳಿಗೆ ನಾಯಕತ್ವ ನೀಡಬಹುದು, ಸರ್ಕಾರವು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ನಾಯಕರೊಬ್ಬರು ಹೇಳುತ್ತಾರೆ. ಎಂಟರಿಂದ ಹತ್ತು ಮಂದಿ ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
