ಚೀನಾದೊಂದಿಗಿನ ಸಂಬಂಧದ ಸುವರ್ಣ ಯುಗ ಮುಗಿಯಿತು: ರಿಷಿ ಸುನಕ್

ಲಂಡನ್: ಶಾಂಘೈ ಪ್ರತಿಭಟನೆಗಳನ್ನು ವರದಿ ಮಾಡುವಾಗ ಬಿಬಿಸಿ ಪತ್ರಕರ್ತರೊಬ್ಬರಿಗೆ ಥಳಿಸಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸರ್ಕಾರ ಚೀನಾವನ್ನು ಖಂಡಿಸಿತ್ತು.
ಇದರ ಬೆನ್ನಲ್ಲೇ ಮಾತನಾಡಿರುವ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ , ಇಂಗ್ಲೆಂಡ್ನ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ
ವ್ಯವಸ್ಥಿತ ಸವಾಲನ್ನು ಒಡ್ಡಿದೆ. ಚೀನಾದೊಂದಿಗಿನ ಸಂಬಂಧಗಳ ಸುವರ್ಣ ಯುಗ ಮುಕ್ತಾಯವಾಗಿದೆ ಎಂದು ಎಚ್ಚರಿಸಿದ್ದಾರೆ.
ವಿದೇಶಾಂಗ ನೀತಿಯ ಕುರಿತಾದ ತಮ್ಮ ಮೊದಲ ಪ್ರಮುಖ ಭಾಷಣದಲ್ಲಿ ಮಾತನಾಡಿದ ರಿಷಿ ಸುನಕ್, ಚೀನಾವು ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿದೆ. ವಿಶ್ವ ವ್ಯವಹಾರಗಳಲ್ಲಿ ಜಾಗತಿಕ ಆರ್ಥಿಕ ಸ್ಥಿರತೆ ಅಥವಾ ಹವಾಮಾನ ಬದಲಾವಣೆಯಂತಹ ಸಮಸ್ಯೆಗಳಿಗೆ ಚೀನಾದ ಪ್ರಾಮುಖ್ಯತೆಯನ್ನು ನಾವು ಸುಲಭವಾಗಿ ನಿರ್ಲಕ್ಷಿಲು ಸಾಧ್ಯವಿಲ್ಲ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜಪಾನ್ ಮತ್ತು ಇತರ ಅನೇಕರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುನಕ್ ಅವರ ಕನ್ಸರ್ವೇಟಿವ್ ಪಕ್ಷದ ಕೆಲವರು ಸುನಕ್ ಅವರನ್ನು ಟೀಕಿಸಿದ್ದಾರೆ. ಬಾಲಿಯಲ್ಲಿ ಈ ತಿಂಗಳಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ರಿಷಿ ಸುನಕ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಿನ ಯೋಜಿತ ಸಭೆಯು ವಿಫಲವಾಗಿತ್ತು. ಕಳೆದ ವಾರ ಲಂಡನ್ ಸೂಕ್ಷ್ಮ ಸರ್ಕಾರಿ ಕಟ್ಟಡಗಳಿಂದ ಚೀನಾ ನಿರ್ಮಿತ ಭದ್ರತಾ ಕ್ಯಾಮೆರಾಗಳನ್ನು ನಿಷೇಧಿಸಿತ್ತು.
ಉಕ್ರೇನ್ ವಿಚಾರದಲ್ಲಿ ಇಂಗ್ಲೆಂಡ್ನ ಮಾಜಿ ಪ್ರಧಾನ ಮಂತ್ರಿಗಳಾದ ಬೋರಿಸ್ ಜಾನ್ಸನ್ ಮತ್ತು ಟ್ರಸ್ ಅವರು ನೀಡಿದ ಬೆಂಬಲವನ್ನು ಉಳಿಸಿಕೊಂಡು ಮುಂದಿನ ವರ್ಷ ಕೈವ್‌ಗೆ ಇಂಗ್ಲೆಂಡ್ ಸರ್ಕಾರ ಮಿಲಿಟರಿ ಸಹಾಯವನ್ನು ನೀಡಲಿದೆ. ನಾವು ಸದಾ ಉಕ್ರೇನ್ನೊಂದಿಗೆ ನಿಲ್ಲುತ್ತೇವೆ. ಮುಂದಿನ ವರ್ಷ ನಾವು ನಮ್ಮ ಮಿಲಿಟರಿ ಸಹಾಯವನ್ನು ಹೆಚ್ಚಿಸುತ್ತೇವೆ ಎಂದು ರಿಷಿ ಸುನಕ್ ಹೇಳಿದ್ದಾರೆ.
