ಕೆಂಪುಕೋಟೆ ಮೇಲೆ ಕೇಸರಿ ಧ್ವಜ,ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಸಿದ್ದರಾಮಯ್ಯ

ಬೆಂಗಳೂರು: ಬಲವಂತದಿಂದ ಕೇಸರಿ ಶಾಲು ಧರಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಂಘಪರಿವಾರದವರು ತಾವೇ ಕೇಸರಿ ಶಾಲುಗಳನ್ನು ಖರೀದಿಸಿ ಧರಿಸುವಂತೆ ವಿದ್ಯಾರ್ಥಿಗಳನ್ನು ಬಲವಂತ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತುಹೋಗಿವೆ, ಜನರ ಗಮನ ಬೇರೆಡೆಗೆ ಸೆಳೆಯಲು ಹಿಜಾಬ್ ಹಾಕುವುದನ್ನೇ ವಿವಾದವಾಗಿ ಮಾರ್ಪಾಡು ಮಾಡಿದ್ದಾರೆ. ಈ ಹಿಜಾಬ್ ಅನ್ನು ಮುಸ್ಲಿಂ ಹೆಣ್ಣು ಮಕ್ಕಳು ಬಹಳ ವರ್ಷಗಳಿಂದ ಹಾಕುತ್ತಾ ಬಂದಿದ್ದರು, ಆದರೂ ಅದರ ಬಗ್ಗೆ ತಕರಾರು ತೆಗೆದು ತಮ್ಮ ಮತ ಕ್ರೋಢೀಕರಣಕ್ಕಾಗಿ ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ನಾವು ಶಾಲೆ, ಕಾಲೇಜಿಗೆ ಹೋಗುವಾಗ ಕೇಸರಿ ಶಾಲು ಧರಿಸಿ ಬಂದಿದ್ದನ್ನು ನಾನೆಲ್ಲೂ ನೋಡಿರಲಿಲ್ಲ ಎಂದ ಸಿದ್ದರಾಮಯ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾವನಾತ್ಮಕ ವಿಚಾರಗಳನ್ನು ಜನರ ಮುಂದೆ ಇಟ್ಟು ಜಾತಿ, ಧರ್ಮದ ನಶೆಯನ್ನು ತುಂಬಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಷ್ಟ್ರ ಧ್ವಜ ಹಾರಿಸುವ ಕಂಬದಲ್ಲಿ ಕೇಸರಿ ಧ್ವಜ ಹಾರಿಸುವ ಮೂಲಕ ದೇಶವನ್ನು ಅವಮಾನಿಸಲಾಗಿದೆ. ಕೆಂಪುಕೋಟೆ ಮೇಲೆ ಮುಂದೊಂದು ದಿನ ರಾಷ್ಟ್ರ ಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಗಳು. ದೇಶದ ಬಗ್ಗೆ ಇವರಿಗೆ ಗೌರವ ಎಲ್ಲಿದೆ? ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.
ಹಿಜಾಬ್ ಅನ್ನು ಹೆಣ್ಣು ಮಕ್ಕಳು ಧರಿಸಿದರೆ ಬೇರೆಯವರಿಗೆ ಏನು ತೊಂದರೆ? ಒಬ್ಬ ಸರ್ಕಾರಿ ಕಾಲೇಜು ಪ್ರಿನ್ಸಿಪಾಲ್ ಹಿಜಾಬ್ ಧರಿಸಿದ ಹೆಣ್ಣು ಮಕ್ಕಳನ್ನು ಒಳಗೆ ಬಿಡದೆ ಕಾಲೇಜು ಗೇಟ್ ಹಾಕ್ತಾರೆ ಎಂದರೆ ಇದಕ್ಕಿಂತ ಅಮಾನವೀಯವಾದುದ್ದು ಏನಿದೆ? ಸಂವಿಧಾನದಲ್ಲಿ ನಂಬಿಕೆ ಇದ್ದರೆ ಸರ್ಕಾರ ಕೂಡಲೇ ಇವರನ್ನು ಅಮಾನತು ಮಾಡಬೇಕಿತ್ತು. ಸಮವಸ್ತ್ರದ ಹೆಸರಲ್ಲಿ ವಿದ್ಯಾರ್ಥಿಗಳ ಮನಸಲ್ಲಿ ದ್ವೇಷ ತುಂಬಿ ಅವರ ಭವಿಷ್ಯ ಹಾಳುಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಯುವ ಜನರು ಹೋರಾಟಕ್ಕೆ ಸಿದ್ಧರಾಗಬೇಕು. ಮುಂದಿನ ವರ್ಷ ಚುನಾವಣೆ ಬರಲಿದೆ, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಎನ್ನುವುದಕ್ಕಿಂತ ಬಿಜೆಪಿಯವರ ದುರಾಡಳಿತದಿಂದ ರಾಜ್ಯವನ್ನು ರಕ್ಷಿಸಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇದರಲ್ಲಿ ಯುವ ಕಾಂಗ್ರೆಸ್ ನ ಪಾತ್ರ ಬಹಳ ದೊಡ್ಡದಿದೆ. ಜನ ಬಿಜೆಪಿ ಅನ್ನು ಅಧಿಕಾರದಿಂದ ಕಿತ್ತೆಸಬೇಕು ಎಂದು ತೀರ್ಮಾನ ಮಾಡಿರುವ ಈ ಸಮಯದಲ್ಲಿ ಮತ್ತೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಎದುರಿಸಲು ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದೂ ಸಿದ್ದರಾಮಯ್ಯ ಮನವಿ ಮಾಡಿದರು.
