
ಬೆಂಗಳೂರು: 35 ವರ್ಷಗಳ ಇತಿಹಾಸದಲ್ಲಿ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದೆ. ಸಿಎಂ ಒಬ್ಬರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದೆ. ಇದು ಭಾರತ ಚುನಾವಣೆಯ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಅಧ್ಯಾಯನ ಎಂದು ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದಾರೆ.
ಪಂಚರಾಜ್ಯ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, ಪ್ರಧಾನಿ ಮೋದಿ ಅವರ ಪರ ಚುನಾವಣೆಯ ಫಲಿತಾಂಶ ಲಭ್ಯವಾಗಿದೆ. ಉತ್ತರ ಪ್ರದೇಶದಲ್ಲಿ 5 ವರ್ಷ ಅಧಿಕಾರ ಮಾಡಿ ಮತ್ತೆ ಅವರದ್ದೇ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದು 65 ವರ್ಷಗಳ ಬಳಿಕ ಮೊದಲ ಬಾರಿಗೆ ನಡೆದಿದೆ. 15 ವರ್ಷ ಅಂದರೆ ಮೂರನೇ ಬಾರಿಗೆ ಗೋವಾದಲ್ಲಿ ಬಿಜೆಪಿಗೆ ಜನರು ಅಧಿಕಾರ ನೀಡಿದ್ದಾರೆ. ಉತ್ತರಾಖಂಡ್ ರಾಜ್ಯ ರಚನೆ ಆದ ಸಮಯದಿಂದ ಬಿಜೆಪಿ ಮೊದಲ ಬಾರಿಗೆ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಇದು ಆ ರಾಜ್ಯದ ಇತಿಹಾಸದಲ್ಲೇ ಮೊದಲು ಎಂದಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೆ ಹೆಚ್ಚಿನ ಪ್ರಭಾವ ಬಿರುತ್ತದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ತೋರಿರುವ ಪ್ರದರ್ಶನಕ್ಕಿಂತ ಉತ್ತಮ ಫಲಿತಾಂಶ ಲಭ್ಯವಾಗಲಿದೆ. ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಹಾಗೂ ಪ್ರಧಾನಿ ಮೋದಿ ಅವರ ಜೋಡಿ ಯಾವ ರೀತಿ ಕಾರ್ಯ ಮಾಡಿತ್ತೋ ಅದೇ ರೀತಿ ರಾಜ್ಯದಲ್ಲಿ ಬೊಮ್ಮಾಯಿ ಹಾಗೂ ಮೋದಿ ಜೋಡಿ ಕೆಲಸ ಮಾಡಲಿದೆ ಎಂದಿದ್ದಾರೆ.
