Breaking NewsLatestಮಹಿಳೆರಾಜಕೀಯರಾಷ್ಟ್ರೀಯಸಮಾಜ

ರಕ್ಷಣಾ ಪಡೆಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಣೆ; ಮನಃಸ್ಥಿತಿ ಸಮಸ್ಯೆ ಎಂದು ಸರ್ಕಾರಕ್ಕೆ ಸುಪ್ರೀಂ ತರಾಟೆ

ನವದೆಹಲಿ: ಸರ್ಕಾರದ ನೀತಿಗಳ ಹಿಂದಿರುವ ಮನಃಸ್ಥಿತಿಯ ಬಗ್ಗೆ ಕಟು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮಹಿಳೆಯರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್​ಡಿಎ)ಯ ಪರೀಕ್ಷೆಗಳನ್ನು ಬರೆಯಬಹುದು ಎಂದು ಹೇಳಿದೆ.

ಸೆಪ್ಟೆಂಬರ್ 5ರಂದು ಎನ್​ಡಿಎ ಪರೀಕ್ಷೆ ನಡೆಯಲಿದ್ದು, ಸುಪ್ರೀಂ ಕೋರ್ಟ್​ನ ಈ ಮಹತ್ವದ ತೀರ್ಪು ಹೆಚ್ಚು ಮಹಿಳಾ ಅಭ್ಯರ್ಥಿಗಳು ಭಾರತೀಯ ಸಶಸ್ತ್ರ ಪಡೆಗೆ ಸೇರ್ಪಡೆಯಾಗುವುದಕ್ಕೆ ಅನುವು ಮಾಡಿಕೊಡಲಿದೆ.

ದೇಶದ ಸಶಸ್ತ್ರ ಪಡೆಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಸೇವಾ ಅವಕಾಶಗಳ ವಿಚಾರ ಬಂದಾಗ ಕಾಣಿಸಿಕೊಳ್ಳುವ ಮನಃಸ್ಥಿತಿ ಸಮಸ್ಯೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಸುಪ್ರೀಂ ಕೋರ್ಟ್, ನೀವಿದನ್ನು ಬದಲಿಸಿಕೊಳ್ಳುವುದು ಒಳ್ಳೆಯದು ಎಂದು ಸರ್ಕಾರವನ್ನು ಎಚ್ಚರಿಸಿತು.

ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಪ್ರವೇಶ ಕೊಡದೆ ಹೊರಗಿಡುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ನಡೆ ಸಂಪೂರ್ಣವಾಗಿ ಲಿಂಗಾಧಾರಿತ ಎಂದು ವಾದಿಸಿದ್ದ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತನ್ನ ನಿಲುವು ಪ್ರಕಟಿಸಿತು.

ರಕ್ಷಣಾ ಅಕಾಡೆಮಿ ಧೋರಣೆಯನ್ನು ಬದಲಿಸಿಕೊಳ್ಳುವುದಕ್ಕೆ ತಾನೇ ಮುಂದಾಗಲು ಈ ಆದೇಶ ಸ್ಫೂರ್ತಿಯಾದೀತೆಂದು ಆಶಿಸಿದ ಸುಪ್ರೀಂ ಕೊರ್ಟ್, ಈ ವಿಚಾರದಲ್ಲಿ ನ್ಯಾಯಾಲಯ ಪ್ರತ್ಯೇಕ ನಿರ್ದೇಶನ ನೀಡಬೇಕಾಗಿ ಬರಲಿಕ್ಕಿಲ್ಲವೆಂದು ಭಾವಿಸುವುದಾಗಿ ಹೇಳಿದೆ.

ಇದು ಮನಃಸ್ಥಿತಿ ಸಮಸ್ಯೆ. ನೀವಿದನ್ನು (ಸರ್ಕಾರ) ಬದಲಿಸಿಕೊಳ್ಳಬೇಕು. ನಾವೇ ಆದೇಶ ಹೊರಡಿಸಬೇಕಾದ ಪ್ರಮೇಯ ತಂದಿಡಬೇಡಿ ಎಂದು ನ್ಯಾಯಾಲಯ ಹೇಳಿದೆ.

ನೀತಿ ನಿರೂಪಣೆಯು ಲಿಂಗ ತಾರತಮ್ಯದ ಆಧಾರದಲ್ಲಿದೆ. ಸಂಬಂಧಪಟ್ಟವರು ಈ ವಿಚಾರದಲ್ಲಿ ನಮ್ಮ ಆದೇಶದ ಹಿನ್ನೆಲೆಯಲ್ಲಿ ರಚನಾತ್ಮಕ ನಿಲುವು ತಳೆಯಬೇಕೆಂದು ಕೋರ್ಟ್ ನಿರ್ದೇಶಿಸಿದೆ.

ನ್ಯಾಯಮೂರ್ತಿಗಳಾದ ಎಸ್​ ಕೆ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ವಿಭಾಗೀಯ ಪೀಠವು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ ಕುರಿತು ತನ್ನ ಅಸಮಾಧಾನ ವ್ಯಕ್ತಪಡಿಸಿತು. ಕಳೆದ ವರ್ಷ ಫೆಬ್ರವರಿಯಲ್ಲಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು ನೀಡಿದ್ದ ತೀರ್ಪು ಸೇರಿದಂತೆ ಸುಪ್ರೀಂ ಕೋರ್ಟ್​ನ ಇತರ ತೀರ್ಪುಗಳು ಕೂಡ ಇದೇ ವಿಚಾರಕ್ಕೆ ಅಸಮಾಧಾನ ಪ್ರಕಟಿಸಿದ್ದವು ಎಂಬುದನ್ನು ಗಮನಿಸಬೇಕು.

ಈ ಹಿಂದಿನ ತೀರ್ಪು ಸೈನ್ಯದಲ್ಲಿ ಮಹಿಳೆಯರಿಗಾಗಿ ಖಾಯಂ ಆಯೋಗಕ್ಕೆ ನಿರ್ದೇಶಿಸಿದ ಬಳಿಕವೂ ಹಳೆಯ ಚಾಳಿಯೇ ಮುಂದುವರಿದಿರುವುದು ಅಸಂಬದ್ಧ ಎಂದು ಪೀಠ ಅಭಿಪ್ರಾಯಪಟ್ಟಿತು.

ಎನ್​ಡಿಎ ಪರೀಕ್ಷೆಯ ಮೂಲಕ ನೇಮಕಗೊಂಡ ಪುರುಷರಿಗೆ ಸಶಸ್ತ್ರ ಪಡೆಗಳಲ್ಲಿ ಶಾಶ್ವತ ಆಯೋಗವನ್ನು ನೀಡಲಾಗುತ್ತದೆ. ಆದರೆ ಮಹಿಳಾ ಅಭ್ಯರ್ಥಿಗಳು ತಮ್ಮ ವೃತ್ತಿಜೀವನದ ನಂತರದ ಹಂತದಲ್ಲಿ ಶಾಶ್ವತ ಆಯೋಗಕ್ಕೆ ಪರಿಗಣಿಸಲ್ಪಡುವ ಮೊದಲು ಅಲ್ಪ ಸೇವಾ ಆಯೋಗದ ಅಧಿಕಾರಿಗಳಾಗಿರಬೇಕಿದೆ.

ಸೇನೆಯಲ್ಲಿ ಮಹಿಳಾ ಅಧಿಕಾರಿಗಳು ಪುರುಷರಿಗೆ ಸರಿಸಮಾನವಾಗಿ ಕಮಾಂಡ್ ಹುದ್ದೆಗಳು ಮತ್ತು ಖಾಯಂ ಆಯೋಗಗಳನ್ನು ಪಡೆಯಬಹುದು ಎಂದು ಕಳೆದ ವರ್ಷ ಸುಪ್ರೀಂ ಕೋರ್ಟ್ ಹೇಳಿತ್ತು. ಸರ್ಕಾರದ ತಾರತಮ್ಯ ಮತ್ತು ಗೊಂದಲದ ವಾದಗಳನ್ನು, ಸ್ಟಿರಿಯೋಟೈಪ್ ಮಾದರಿ ಆಧಾರಿತ ಎಂದು ನ್ಯಾಯಾಲಯ ತಳ್ಳಿಹಾಕಿತ್ತು.

ಮಹಿಳಾ ಅಧಿಕಾರಿಗಳನ್ನು ಘಟಕದ ಕಮಾಂಡ್ ಆಗಿ ಸ್ವೀಕರಿಸಲು ಸೇನಾಪಡೆಗಳು ಇನ್ನೂ ಮಾನಸಿಕವಾಗಿ ಸಿದ್ಧಗೊಂಡಿಲ್ಲ. ಏಕೆಂದರೆ ಅವರು ಪ್ರಧಾನವಾಗಿ ಗ್ರಾಮೀಣ ಹಿನ್ನೆಲೆಯಿಂದ ಬಂದವರು ಎಂದು ಸರ್ಕಾರ ವಾದಿಸಿತು.

ಆದರೆ, ಲಿಂಗದ ಆಧಾರದಲ್ಲಿ ಆಕಾಂಕ್ಷೆಗಳು ವ್ಯಕ್ತವಾಗಬೇಕೆಂದುಕೊಳ್ಳುವುದು ಮಹಿಳೆಯರ ಘನತೆಗೆ ಮತ್ತು ದೇಶಕ್ಕೆ ಅಪಮಾನಕರ ಎಂದು ಕೋರ್ಟ್ ಹೇಳಿತು. ಮಹಿಳಾ ಅಧಿಕಾರಿಗಳು ಪುರುಷ ಸಹವರ್ತಿಗಳಿಗೆ ಸಹಾಯಕರಷ್ಟೇ ಎಂದುಕೊಳ್ಳುವ ಕಾಲ ಮುಗಿದಿದೆ ಎಂದು ಹೇಳಿದ ನ್ಯಾಯಾಲಯ, ಮಹಿಳೆಯರ ದೈಹಿಕ ಲಕ್ಷಣಗಳಿಗೂ ಅವರ ಹಕ್ಕುಗಳಿಗೂ ಯಾವುದೇ ಸಂಬಂಧವಿಲ್ಲ. ಮನಃಸ್ಥಿತಿ ಬದಲಾಗಬೇಕು ಎಂದು ಸ್ಪಷ್ಟವಾಗಿ ಸೂಚಿಸಿತು.

Spread the love

Related Articles

Leave a Reply

Your email address will not be published. Required fields are marked *

Back to top button